ಬುಧವಾರ, ಜನವರಿ 22, 2020
28 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಒಪ್ಪಿಗೆ ಪಡೆದು ಪಟ್ಟಿ ಅಂತಿಮಗೊಳಿಸಲು ಸೂಚನೆ

ಫಲಾನುಭವಿಗಳ ಆಯ್ಕೆ; ಶಾಸಕರ ಹಸ್ತಕ್ಷೇಪಕ್ಕೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಎಸ್‌.ಸಿ.ಪಿ, ಟಿ.ಎಸ್‌.ಪಿ. ಯೋಜನೆಯ ಅಡಿಯಲ್ಲಿ ಸೋಲಾರ್‌ ವಾಟರ್‌ ಹೀಟರ್‌, ವಿದ್ಯುದ್ದೀಪಗಳ ಹಂಚಿಕೆಗೆ ಸಂಬಂಧಿಸಿ ಫಲಾನುಭವಿಗಳ ಪಟ್ಟಿ ತಯಾರಿಕೆಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯುವುದು ಕಡ್ಡಾಯ. ಅದರಂತೆ ಅರಣ್ಯ ಇಲಾಖೆ ಮುಂದುವರೆಯಬೇಕು’

ಗುರುವಾರ ನಗರದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಾಧ್ಯಕ್ಷ ಮಜ್ಜಿಗಿ ಶಿವಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಮೇಲಿನಂತೆ ಅರಣ್ಯ ಇಲಾಖೆಯ ಅಧಿಕಾರಿ ಎನ್‌. ಬಸವರಾಜ ಅವರಿಗೆ ತಾಕೀತು ಮಾಡಿದರು.

ಮರಿಯಮ್ಮನಹಳ್ಳಿ ಹೋಬಳಿಯ 40 ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ಶಾಸಕ ಭೀಮಾ ನಾಯ್ಕ ಅವರು ಪಟ್ಟಿ ಕೊಟ್ಟಿದ್ದಾರೆ. ಆದರೆ, ಅವರೆಲ್ಲ ಅರ್ಹ ಫಲಾನುಭವಿಗಳಲ್ಲ. ಅವರು ಶಾಸಕರ ಬೆಂಬಲಿಗರು. ಅವರಿಗೆ ಮಣೆ ಹಾಕಿರುವುದು ಸರಿಯಲ್ಲ. ಅರ್ಹರ ಪಟ್ಟಿ ತಯಾರಿಸಬೇಕು. ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಬೇಕು ಎಂದು ಸೂಚಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬಸವರಾಜ, ‘ಶಾಸಕರು ಒಂದು ಹೇಳುತ್ತಾರೆ. ನೀವೊಂದು ಹೇಳುತ್ತೀರಿ. ನಾನೇನು ಮಾಡಬೇಕು. ಯಾರೇ ಫಲಾನುಭವಿಗಳ ಹೆಸರು ಸೂಚಿಸಿದರೆ, ಅದನ್ನು ಪರಿಶೀಲಿಸಿದ ನಂತರವೇ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ’ ಎಂದು ಹೇಳಿದರು.

ಅದಕ್ಕೆ ಷಣ್ಮುಖಪ್ಪ, ‘ಶಾಸಕರು ಸೂಚಿಸಿದ ಎಲ್ಲರ ಹೆಸರು ಕೈಬಿಡುವುದು ಬೇಡ. ಅರ್ಹರಿದ್ದರೆ ಅವಕಾಶ ಮಾಡಿಕೊಡಿ. ಆದರೆ, ನೈಜ ಫಲಾನುಭವಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು. ಅದಕ್ಕೆ ಬಸವರಾಜ ಸಮ್ಮತಿ ಸೂಚಿಸಿದರು.

ಪಂಚಾಯಿತಿಯಲ್ಲೇ ಕಾರ್ಡ್‌

‘ಆಯುಷ್ಮಾನಭವ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್‌ಗಳನ್ನು ಬರುವ ದಿನಗಳಲ್ಲಿ ಆಯಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿಗಳಲ್ಲಿ ವಿತರಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ತಿಳಿಸಿದರು.

‘ಸದ್ಯ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಡ್‌ ಕೊಡಲಾಗುತ್ತಿದೆ. ಬಿ.ಪಿ.ಎಲ್‌. ಕಾರ್ಡು ಹೊಂದಿದವರಿಗೆ ₹5 ಲಕ್ಷದ ವರೆಗಿನ ಚಿಕಿತ್ಸೆಗೆ 150ಕ್ಕೂ ಅಧಿಕ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಭೂಪಾಲ, ‘ಎಲ್ಲಾ ಕಟ್ಟಡ ಕಾರ್ಮಿಕರಿಗೆ ಬರುವ ದಿನಗಳಲ್ಲಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲಾಗುವುದು. ಮದುವೆ, ಚಿಕಿತ್ಸೆಗೆ ಧನಸಹಾಯ ನೀಡಲಾಗುವುದು. ಒಬ್ಬ ವ್ಯಕ್ತಿ ಕಾರ್ಮಿಕನೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿದ ನಂತರವೇ ಕಾರ್ಡ್‌ ವಿತರಿಸಲಾಗುವುದು’ ಎಂದು ವಿವರಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಅವರ ಇಲಾಖೆಯ ಪ್ರಗತಿ ಸಭೆಗೆ ತಿಳಿಸಿದರು. ಹೆಚ್ಚಿನ ಚರ್ಚೆ ನಡೆಯದ ಕಾರಣ ಹನ್ನೊಂದುವರೆಗೆ ಆರಂಭವಾದ ಸಭೆ ಒಂದು ಗಂಟೆಗೆ ಮುಗಿಯಿತು.
ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು