ಬುಧವಾರ, ಡಿಸೆಂಬರ್ 11, 2019
27 °C
ಸಾಹಿತ್ತಿಕ, ಸಾಂಸ್ಕೃತಿಕ ವಲಯದವರಿಂದ ಅಪಸ್ವರ; ಎರಡು ದಿನದ ಉತ್ಸವಕ್ಕೆ ಅಸಮಾಧಾನ

ಹೊಸಪೇಟೆ: ಕಾಟಾಚಾರದ ‘ಹಂಪಿ ಉತ್ಸವಕ್ಕೆ’ ವಿರೋಧ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ‘ಹಂಪಿ ಉತ್ಸವ’ವನ್ನು ಜನವರಿಯಲ್ಲಿ ಎರಡು ದಿನ ಸರಳವಾಗಿ ಆಚರಿಸುವ ಸಂಬಂಧ ಜಿಲ್ಲಾ ಆಡಳಿತವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದಕ್ಕೆ ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ಬಳ್ಳಾರಿ ಜಿಲ್ಲೆಯಲ್ಲಿ ಸತತ ನಾಲ್ಕು ವರ್ಷಗಳಿಂದ ಬರ ಇದೆ. ಹೀಗಿದ್ದರೂ ಈ ಹಿಂದಿನ ವರ್ಷಗಳಲ್ಲಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ಹಿಂದೆ ಇಲ್ಲದ ಬರ ಈಗೇಕೇ ಅಡ್ಡಿಯಾಗುತ್ತಿದೆ’ ಎಂದು ಸಾಹಿತಿಗಳು, ಕಲಾವಿದರು ಪ್ರಶ್ನಿಸಿದ್ದಾರೆ.

‘ಹಂಪಿ ಉತ್ಸವ’ದ ಮಹತ್ವವನ್ನು ಉದ್ದೇಶಪೂರ್ವಕವಾಗಿ ಕಡಿಮೆಗೊಳಿಸಲಾಗುತ್ತಿದೆ. ಅಲ್ಲದೇ ಸ್ಥಳೀಯರು ಅದರ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತದ ಕಾರಣ ಸರ್ಕಾರ ಸ್ವೇಚ್ಛಾಚಾರದಿಂದ ವರ್ತಿಸುತ್ತಿದೆ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಪಿ. ಅಬ್ದುಲ್ಲಾ.

‘ಮೈಸೂರಿನ ಕೆಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಿದ್ದರೂ ಅಲ್ಲಿ ಪ್ರತಿ ವರ್ಷದಂತೆ ನಾಡಹಬ್ಬ ದಸರಾವನ್ನು ಈ ವರ್ಷ ಕೂಡ ಸಂಭ್ರಮದಿಂದ ಆಚರಿಸಿದ್ದಾರೆ. ಯಾವುದೇ ಕುಂದು ಕೊರತೆ ಆಗದಂತೆ ದಸರಾ ಸಂಘಟಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದ್ದರು. ಹೀಗೆಲ್ಲ ಇರುವಾಗ ಹಂಪಿ ಉತ್ಸವಕ್ಕೆ ತಾತ್ಸಾರವೇಕೇ?. ಹೈದರಾಬಾದ್‌ ಕರ್ನಾಟಕದ ಅನುದಾನ ಖರ್ಚು ಮಾಡುವ ವಿಷಯದಲ್ಲೂ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಈ ಭಾಗದ ಜನ ಅಂದರೆ ಅಷ್ಟು ಅಲರ್ಜಿಯೇ?’ ಎಂದು ಪ್ರಶ್ನಿಸಿದ್ದಾರೆ.

‘ಈ ಹಿಂದಿನ ವರ್ಷಗಳಲ್ಲಿ ಬರದ ಜತೆಗೆ ತುಂಗಭದ್ರಾ ಜಲಾಶಯ ಕೂಡ ತುಂಬಿರಲಿಲ್ಲ. ಈ ಸಲ ಶಿವಮೊಗ್ಗ ಭಾಗದಲ್ಲಿ ಉತ್ತಮ ಮಳೆ ಆಗಿರುವುದರಿಂದ ಅಣೆಕಟ್ಟೆ ಭರ್ತಿಯಾಗಿದೆ. ಅಪಾರ ಪ್ರಮಾಣದ ನೀರು ನದಿಯಲ್ಲಿ ಹರಿದಿದೆ. ಎರಡನೇ ಬೆಳೆಗೂ ನೀರು ಹರಿಸುವ ತೀರ್ಮಾನಕ್ಕೆ ಬರಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ವಲ್ಪ ಉತ್ತಮ ವಾತಾವರಣವೇ ಇದೆ. ಹೀಗಿದ್ದರೂ ಉತ್ಸವದ ಬಗ್ಗೆ ಅಸಡ್ಡೆಯೇಕೆ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಹಂಪಿ ಉತ್ಸವವನ್ನು ಬಹಳ ದೂರದೃಷ್ಟಿ ಇಟ್ಟುಕೊಂಡು ಎಂ.ಪಿ. ಪ್ರಕಾಶ್‌ ಅವರು 1983ರಲ್ಲಿ ಆರಂಭಿಸಿದ್ದರು. ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವದಂತೆ ಹಂಪಿ ಉತ್ಸವದ ದಿನಾಂಕ (ನ.3ರಿಂದ 5) ಕೂಡ ಸರ್ಕಾರದ ಡೈರಿಯಲ್ಲಿ ಕಾಯಂ ಆಗಿ ಪ್ರಕಟವಾಗಬೇಕು. ಅದಕ್ಕೆ ವಿಶ್ವಮಾನ್ಯತೆ ಕೊಡಿಸಲು ಪ್ರಕಾಶ್‌ ಶ್ರಮಿಸಿದ್ದರು. ಆದರೆ, ಅವರು ಕಾಲವಾಗಿ ಹೋದ ನಂತರ ಅದಕ್ಕೆ ಚ್ಯುತಿ ತರುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ಸಾಹಿತಿ ಮೃತ್ಯುಂಜಯ ರುಮಾಲೆ ಬೇಸರ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅವರು ಹಂಪಿ ಉತ್ಸವದ ದಿನಾಂಕವನ್ನೇ ಬದಲಿಸಿದ್ದರು. ಅಷ್ಟೇ ಅಲ್ಲ, ಎದುರು ಬಸವಣ್ಣ ಮಂಟಪದ ಎದುರು ನಡೆಯುತ್ತಿದ್ದ ಪ್ರಧಾನ ಕಾರ್ಯಕ್ರಮದ ಸ್ಥಳವನ್ನೇ ಬದಲು ಮಾಡಿದ್ದರು. ಜತೆಗೆ ಸ್ಥಳೀಯ ಕಲಾವಿದರನ್ನು ಕಡೆಗಣಿಸಿ, ಹೊರಗಿನವರಿಗೆ ಮಣೆ ಹಾಕಿದರು. ಸಂಭಾವನೆ ವಿಚಾರದಲ್ಲಿ ಸ್ಥಳೀಯರಿಗೆ ತಾರತಮ್ಯ ಮಾಡಿದರು’ ಎಂದರು.

‘ಹಂಪಿ ಉತ್ಸವವು ಚಾಲುಕ್ಯ, ಬಾದಾಮಿ, ಕಿತ್ತೂರ ಉತ್ಸವದಂತಲ್ಲ. ಅದಕ್ಕೆ ಬಹಳ ದೊಡ್ಡ ವಿಶಾಲತೆ ಇದೆ. ಸರ್ಕಾರ ಹೆಸರಿಗಷ್ಟೇ ಎರಡು ದಿನ ಸರಳವಾಗಿ ಕಾರ್ಯಕ್ರಮ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮೂರು ದಿನ ಸಂಭ್ರಮದಿಂದ ಸಾಹಿತ್ತಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಇಲ್ಲವಾದಲ್ಲಿ ಕೈಬಿಡುವುದೇ ಒಳಿತು’ ಎಂದು ಖಾರವಾಗಿ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು