ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಅಧಿಕಾರಿ ನಡೆದದ್ದೇ ದಾರಿ!

ಫಾಲೋ ಅಪ್‌ ವರದಿ
Last Updated 17 ಮಾರ್ಚ್ 2019, 9:09 IST
ಅಕ್ಷರ ಗಾತ್ರ

ಹೊಸಪೇಟೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನಿಕಟಪೂರ್ವ ಪ್ರಭಾರ ಸಹಾಯಕ ನಿರ್ದೇಶಕ ರಹಮತ್‌ ಉಲ್ಲಾ, ಇಲಾಖೆಯಲ್ಲಿ ತಾನು ಮಾಡಿದ್ದೇ ಸರಿ,ತಾನು ನಡೆದದ್ದೇ ದಾರಿ ಎಂಬ ಧೋರಣೆ ಹೊಂದಿದ್ದರು ಎಂಬ ಆರೋಪ ಇದೆ.

ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ₹38.84 ಲಕ್ಷ ಹಣ ಡ್ರಾ ಮಾಡಿದ ಆರೋಪದ ಮೇರೆಗೆ ಅವರ ವಿರುದ್ಧ ಬಳ್ಳಾರಿಯ ಕೌಲ್‌ ಬಜಾರ್‌ ಠಾಣೆಯಲ್ಲಿ ಎಫ್‌.ಐ.ಆರ್‌. ದಾಖಲಾಗಿದ್ದು, ಈ ಸಂದರ್ಭದಲ್ಲಿ ಅವರ ಕಾರ್ಯವೈಖರಿಗೆ ಸಂಬಂಧಿಸಿದ ಒಂದೊಂದೆ ವಿಚಾರಗಳು ಹೊರಗೆ ಬರುತ್ತಿವೆ.

‘ಇಲಾಖೆಗೆ ಸಂಬಂಧಿಸಿದ ಯಾವುದೇ ವಿಷಯಗಳಿರಲಿ ಅವರು ಯಾರೊಂದಿಗೂ ಚರ್ಚಿಸುತ್ತಿರಲಿಲ್ಲ. ಅವರಿಗೆ ಸರಿ ಅನಿಸಬೇಕಷ್ಟೇ. ಅದು ನಿಯಮಕ್ಕೆ ವಿರುದ್ಧವಾಗಿದ್ದರೂ ಮುಂದುವರಿಯುತ್ತಿದ್ದರು. ಕೆಳಹಂತದ ಅಧಿಕಾರಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅದರಲ್ಲೂ ಹಣಕಾಸಿನ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರೇ ಅದನ್ನು ಆಸಕ್ತಿ ವಹಿಸಿ ಮಾಡುತ್ತಿದ್ದರು. ಅಷ್ಟೇ ಅಲ್ಲ, ತರಾತುರಿಯಲ್ಲಿ ಕೆಲಸ ಮುಗಿಸಿ, ಬಿಲ್‌ ಮಾಡಿಸುತ್ತಿದ್ದರು’ ಎಂದು ಹೇಳಿದರು.

ಇತ್ತೀಚೆಗೆ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಟ್ರ್ಯಾಕ್‌ ಬಳಿ ತರಾತುರಿಯಲ್ಲಿ ನಿರ್ಮಿಸಿರುವ ಶೌಚಾಲಯ ಅದನ್ನು ಪುಷ್ಟೀಕರಿಸುವಂತಿದೆ. ಕ್ರೀಡಾಂಗಣದ ಉಸ್ತುವಾರಿ, ಅಥ್ಲೆಟಿಕ್‌ ತರಬೇತುದಾರ ರೋಹಿಣಿ ಪರ್ವತೆಕರ್‌ ಅವರ ಗಮನಕ್ಕೂ ತರದೇ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು.

‘ಟ್ರ್ಯಾಕ್‌ ಬಳಿ ಶೌಚಾಲಯ ನಿರ್ಮಿಸುವುದು ಬೇಡ. ಅದರಿಂದ ಅಥ್ಲೀಟ್‌ ಹಾಗೂ ವಾಯು ವಿಹಾರಕ್ಕೆ ಬರುವವರಿಗೆ ತೊಂದರೆ ಆಗುತ್ತದೆ. ದುರ್ಗಂಧ ಬರುತ್ತದೆ. ಈಗಾಗಲೇ ಕ್ರೀಡಾಂಗಣದಲ್ಲಿ ಸುಸಜ್ಜಿತ ಶೌಚಾಲಯವಿದೆ’ ಎಂಬ ಸಂಗತಿಯನ್ನು ರೋಹಿಣಿ, ರಹಮತ್‌ ಉಲ್ಲಾ ಅವರ ಗಮನಕ್ಕೆ ತಂದಿದ್ದರು. ಅಷ್ಟೇ ಅಲ್ಲ, ಸಾರ್ವಜನಿಕರು ಅದರ ವಿರುದ್ಧ ಸಹಿ ಸಂಗ್ರಹಿಸಿ, ಮನವಿ ಸಲ್ಲಿಸಿದ್ದರು. ಅದನ್ನು ಅವರು ಕಿವಿಗೆ ಹಾಕಿಕೊಳ್ಳದೆ ಕಾಮಗಾರಿ ಪೂರ್ಣಗೊಳಿಸಿದ್ದರು.

ಕೇವಲ ಹತ್ತು ದಿನಗಳಲ್ಲಿ ಶೌಚಾಲಯ ನಿರ್ಮಾಣಗೊಂಡು ಸಿದ್ಧವಾಯಿತು. ಅದಕ್ಕೆ ಸರಿಯಾಗಿ ಬುನಾದಿ ಹಾಕಿಲ್ಲ. ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿಲ್ಲ. ಕಳಪೆ ಬಣ್ಣ ಬಳಿಯಲಾಗಿದೆ. ಎತ್ತರ ಕೂಡ ಇಲ್ಲ. ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಹೀಗೆ ಯಾರ ಅಭಿಪ್ರಾಯಕ್ಕೂ ಬೆಲೆ ಕೊಡದೆ ನಿರ್ಮಿಸಿದ ಶೌಚಾಲಯವನ್ನು ಇದೀಗ ತೆರವುಗೊಳಿಸಬೇಕೆಂಬ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕುರಿತು ‘ಪ್ರಜಾವಾಣಿ’ ಸಾರ್ವಜನಿಕರ ಅಭಿಪ್ರಾಯ ಆಧರಿಸಿ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT