ಬಳ್ಳಾರಿ: ಅಧಿಕಾರಿಗಳ ನಿರ್ಲಕ್ಷ್ಯ- ಗ್ರಾಮಸ್ಥರ ಗುಳೆ

7
ನರೇಗಾ ಅಡಿ ಆಸ್ತಿ ಸೃಜನೆ ಕಾರ್ಯಾಗಾರದಲ್ಲಿ ಡಾ.ರಾಜೇಂದ್ರ ವಿಷಾದ

ಬಳ್ಳಾರಿ: ಅಧಿಕಾರಿಗಳ ನಿರ್ಲಕ್ಷ್ಯ- ಗ್ರಾಮಸ್ಥರ ಗುಳೆ

Published:
Updated:
Deccan Herald

ಬಳ್ಳಾರಿ: ‘ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕೆಲವು ಅಧಿಕಾರಿಗಳು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಗುಳೆ ಹೋಗುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ವಿಷಾದಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ಅಡಿ ದೀರ್ಘಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಕುರಿತು ನಗರದ ಜೋಳದರಾಶಿ ದೊಡ್ಡನಗೌಡ ರಂಗಂಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಉದ್ಯೋಗ ಖಾತ್ರಿಯಡಿ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಅನುದಾನವಿದೆ. ಆದರೆ ಅದನ್ನು ಬಳಸುವಲ್ಲಿ ಅಧಿಕಾರಿಗಳು ಉತ್ಸಾಹ ತೋರದೇ ಇರುವುದರಿಂದ ಜನರಿಗೆ ಕೆಲಸ ದೊರಕದ ಸನ್ನಿವೇಶ ಕೆಲವೆಡೆ ನಿರ್ಮಾಣವಾಗಿದೆ. ಇನ್ನು ಮುಂದೆ ಇಂಥ ಕಾರ್ಯವೈಖರಿಯನ್ನು ಸಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಪಟ್ಟಿಗಳು ಮಾದರಿಗಾಗಿಯೇ ಹೊರತು ಅವೇ ಅಂತಿಮವಲ್ಲ. ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ತಕ್ಕಂತೆ ಮಾರ್ಪಾಟು ಮಾಡಲು ಅವಕಾಶವಿದೆ. ಇದು ಗೊತ್ತಿದ್ದರೂ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಗೊತ್ತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾನವ ದಿನಗಳ ಸೃಜನೆ ಗುರಿಯಲ್ಲಿ ಶೇ.54ರಷ್ಟು ಸಾಧಿಸಿರುವ ಜಿಲ್ಲೆಯು ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ಕೂಲಿ ಪಾವತಿಯಲ್ಲಿ 3ನೇ ಸ್ಥಾನದಲ್ಲಿದೆ. ಇ-ಆಡಳಿತದಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಇಂಥ ಸಾಧನೆಗಳ ನಡುವೆ ಗುಳೆ ಹೋಗುವುದು ಮತ್ತು ಅವ್ಯವಹಾರಗಳು ಜಿಲ್ಲೆಗೆ ಕಪ್ಪುಚುಕ್ಕೆಯಾಗುತ್ತವೆ’ ಎಂದರು.

‘ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಉಪಗ್ರಹದ ಮೂಲಕ ಸರ್ವೆ ನಡೆಸಿ ಮಾಹಿತಿ ತರಿಸಿಕೊಳ್ಳಲಾಗಿದೆ’ ಎಂದರು ಹೇಳಿದರು.

ಆಸ್ತಿ ಸೃಜನೆ: ‘ಖಾತ್ರಿ ಯೋಜನೆ ಉದ್ಯೋಗ ನೀಡುವುದರಾಚೆಗೆ, ಆಸ್ತಿ ಸೃಜನೆಯತ್ತಲೂ ಗುರಿ ಇಟ್ಟಿದೆ. ಶಾಲೆಯ ಆಟದ ಮೈದಾನ, ಕೈದೋಟ, ಶೌಚಾಲಯ ನಿರ್ಮಾಣ, ತಡೆಗೋಡೆಗಳನ್ನು ನಿರ್ಮಿಸಬಹುದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಅಂಶಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದರು. ಜಿಪಂ ಅಧ್ಯಕ್ಷೆ ಸಿ.ಭಾರತಿ ಮಾತನಾಡಿದರು.

ಐಎಎಸ್ ಪ್ರೊಬೆಷನರಿ ಅಧಿಕಾರಿ ಕೆ.ಆರ್‌.ನಂದಿನಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ರಾಧಾ ಧರಪ್ಪ ನಾಯಕ್, ತಾಪಂ ಅಧ್ಯಕ್ಷೆ ರಮೀಜಾ ಬೀ, ಇದ್ದರು.

ತಾಲ್ಲೂಕು ಪಂಚಾಯ್ತಿಗಳ ಎಲ್ಲ ಜನಪ್ರತಿನಿಧಿಗಳು, ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಸಾಮಗ್ರಿ ಸರಬರಾಜುದಾರರು, ಜಿಲ್ಲಾಮಟ್ಟದ ಅಧಿಕಾರಿಗಳು, ಪಂಚಾಯತ್‍ ರಾಜ್ ಎಂಜನಿಯರ್‌ಗಳು, ತಾಂತ್ರಿಕ ಸಹಾಯಕರು ಭಾಗವಹಿಸಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !