ಸೋಮವಾರ, ಆಗಸ್ಟ್ 19, 2019
24 °C

ಹೊಸಪೇಟೆ: ಒಂದು ಗಂಟೆ ಬಿರುಸಿನ ಮಳೆ

Published:
Updated:
Prajavani

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುರುವಾರ ಸಂಜೆ ಬಿರುಸಿನ ಮಳೆಯಾಯಿತು.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಆರಂಭವಾದ ಮಳೆ ಎಡೆಬಿಡದೆ ಒಂದು ಗಂಟೆ ನಿರಂತರವಾಗಿ ಸುರಿಯಿತು. ರಭಸದಿಂದ ಮಳೆಯಾಗಿದ್ದರಿಂದ ರಸ್ತೆಗಳ ಮೇಲೆ ನೀರು ಹರಿಯಿತು. ಚರಂಡಿಗಳು ಉಕ್ಕಿ ಹರಿದಿದ್ದರಿಂದ ಹೊಲಸು ರಸ್ತೆ ಮೇಲೆ ಹರಿದಾಡಿತ್ತು.

ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಚರಂಡಿಯ ನೀರು ರಸ್ತೆ ಮೇಲೆ ಹರಿದಾಡಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಏಕಾಏಕಿ ಮಳೆ ಸುರಿದಿದ್ದರಿಂದ ನಗರದ ತುಂಗಭದ್ರಾ ಜಲಾಶಯ ಹಾಗೂ ಹಂಪಿ ಕಣ್ತುಂಬಿಕೊಳ್ಳಲು ಬಂದಿದ್ದ ಜನ ನೆನೆದರು.

ಸ್ವಾತಂತ್ರ್ಯೋತ್ಸವ ದಿನದ ನಿಮಿತ್ತ ಅಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟ್‌ ತೆರೆದು ನದಿಗೆ ನೀರು ಹರಿಸಲಾಗುತ್ತದೆ. ರಾತ್ರಿ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗುತ್ತದೆ. ಈ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಲು ಬೇರೆ ಬೇರೆ ಕಡೆಗಳಿಂದ ಜನ ಬರುತ್ತಾರೆ. ಆದರೆ, ಸಂಜೆ ಹೊತ್ತಿನಲ್ಲಿ ಮಳೆ ಸುರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 50, ಟಿ.ಬಿ. ಡ್ಯಾಂ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹಂಪಿ ಸಮೀಪದ ತುಂಗಭದ್ರಾ ನದಿ ಮೈದುಂಬಿಕೊಂಡು ಹರಿಯುತ್ತಿದ್ದು, ಅದನ್ನು ನೋಡಲು ವಾರದಿಂದ ಅಪಾರ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಗುರುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. 

ತಾಲ್ಲೂಕಿನ ಬಸವನದುರ್ಗ, ಹೊಸೂರು, ಕಾರಿಗನೂರು, ಕಮಲಾಪುರ, ಮಲಪನಗುಡಿ, ಹೊಸ ಮಲಪನಗುಡಿ, ಗಾಳೆಮ್ಮನ ಗುಡಿ, ವ್ಯಾಸನಕೆರೆ, ಮರಿಯಮ್ಮನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

Post Comments (+)