ಶುಕ್ರವಾರ, ನವೆಂಬರ್ 15, 2019
26 °C
ಬೆಳೆ ನಿರ್ವಹಣೆಯ ಖರ್ಚು ಹಿಂತಿರುಗುತ್ತಿಲ್ಲ; ಸಂಕಷ್ಟದಲ್ಲಿ ಇಟ್ಟಿಗಿ ಹೋಬಳಿ ರೈತರು

ಕೊಳೆರೋಗಕ್ಕೆ ತಿಪ್ಪೆ ಸೇರುತ್ತಿರುವ ಈರುಳ್ಳಿ

Published:
Updated:
Prajavani

ಹೂವಿನಹಡಗಲಿ: ತಾಲ್ಲೂಕಿನ ಈರುಳ್ಳಿ ಬೆಳೆಗೆ ಕೊಳೆ ರೋಗಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಟ್ಟಿಗಿ ಹೋಬಳಿ ವ್ಯಾಪ್ತಿಯ ಬಹುತೇಕ ಬೆಳೆ ಹಾನಿಗೀಡಾಗಿದೆ. ರೋಗಕ್ಕೆ ತುತ್ತಾದ ಕೊಳೆತ ಈರುಳ್ಳಿಯನ್ನು ರೈತರು ತಿಪ್ಪೆಗೆ ಸುರಿಯುತ್ತಿದ್ದಾರೆ.

ಅಕ್ಟೋಬರ್ ತಿಂಗಳಿಡಿ ಸುರಿದ ಮಳೆ ಸೂಕ್ಷ್ಮ ಬೆಳೆಗಳ ಮೇಲೆ ಅಡ್ಡ ಪರಿಣಾಮ ಬೀರಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆಗೆ ಶೀಲಿಂಧ್ರಕಾರಕ ಕೊಳೆರೋಗ ಕಾಣಿಸಿಕೊಂಡಿದೆ. ನೆಲದಲ್ಲೇ ಗಡ್ಡೆ ಕೊಳೆಯುವ ಈ ವಿಚಿತ್ರ ರೋಗ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಹೊಲಗಳಲ್ಲಿ ಸಮೃದ್ಧ ಬೆಳೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದನ್ನು ಕಂಡು ರೈತರು ಹರ್ಷಗೊಂಡಿದ್ದರು. ಈ ಸಂಭ್ರಮ ರೈತರ ಮೊಗದಲ್ಲಿ ಬಹುಕಾಲ ಉಳಿಯಲಿಲ್ಲ. ಕಟಾವು ಹಂತದಲ್ಲಿ ವಕ್ಕರಿಸಿದ ಕೊಳೆರೋಗವು ರೈತರ ಕನಸುಗಳನ್ನು ನುಚ್ಚುನೂರು ಮಾಡಿದೆ.

ಇಟ್ಟಿಗಿ ಭಾಗದಲ್ಲಿ ಹೊಲದಲ್ಲೇ ಗಡ್ಡೆ ಕೊಳೆತು ದುರ್ನಾತ ಬೀರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಕಟಾವು ಮಾಡಿದ ಬೆಳೆಯೂ ದಿನ ಕಳೆದಂತೆ ಕೊಳೆಯುತ್ತಿದ್ದು, ವಿಧಿ ಇಲ್ಲದೇ ತಿಪ್ಪೆಗೆ ಸುರಿಯುತ್ತಿದ್ದಾರೆ.

ತಾಲ್ಲೂಕಿನಲ್ಲಿ 1,400 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇಟ್ಟಿಗಿ ಹೋಬಳಿಯಲ್ಲೇ 1,200 ಹೆಕ್ಟೇರ್ ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಇಟ್ಟಿಗಿ, ಉತ್ತಂಗಿ, ತಳಕಲ್ಲು, ಮಹಾಜನದಹಳ್ಳಿ, ಎಂ.ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ ಗ್ರಾಮಗಳಲ್ಲಿ ರೋಗಬಾಧೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ತಾಲ್ಲೂಕಿನಲ್ಲಿ ಕೊಳೆರೋಗದಿಂದಾಗಿ 1,000 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾನಿಗೀಡಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಅಂದಾಜಿಸಿದ್ದಾರೆ.

‘ಮೂರು ಎಕರೆ ಈರುಳ್ಳಿ ಬೆಳೆಯಲು ₹80,000 ಖರ್ಚು ಮಾಡಿದ್ದೇವೆ. ರೋಗದಿಂದ ಶೇ 50 ರಷ್ಟು ಇಳುವರಿ ಕಡಿಮೆಯಾಗಿ ₹50,000 ಮಾತ್ರ ಸಿಕ್ಕಿದೆ. ಪ್ರತಿವರ್ಷವೂ ಇದೇ ರೀತಿ ನಷ್ಟ ಆಗುತ್ತಿರುವುದರಿಂದ ಸಾಲ ಬೆಟ್ಟದಂತೆ ಏರುತ್ತಿದೆ. ಈ ಬಾರಿ ಉತ್ತಮ ಬೆಲೆ ಸಿಗುವ ಲಕ್ಷಣ ಇದ್ದರೂ ಮಳೆಯಿಂದ ಬೆಳೆ ಹಾಳಾಗಿ ಹೋಗಿದೆ. ದೇವರು ಈ ವರ್ಷ ಅನ್ನ ಕೊಟ್ಟು ಕಸಿದುಕೊಂಡು ಬಿಟ್ಟ’ ಎಂದು ಇಟ್ಟಿಗಿ ರೈತ ರಾಜಶೇಖರ ನೋವಿನಿಂದ ಹೇಳಿದರು.

‘ಮಳೆ ಕೈಕೊಟ್ಟಿದ್ದರಿಂದ ಟ್ಯಾಂಕರ್ ಮೂಲಕ ನೀರು ಹರಿಸಿ ಬೆಳೆ ಉಳಿಸಿಕೊಂಡಿದ್ದೆವು. ಕಟಾವು ಹಂತದಲ್ಲಿ ಮಳೆ ಸುರಿದು ಇಡೀ ಹೊಲ ರೋಗಕ್ಕೆ ತುತ್ತಾಗಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಷ್ಟಪಟ್ಟು ಬೆಳೆಸಿದ ಈರುಳ್ಳಿ ಕೊಳೆತಿರುವುದರಿಂದ ವಿಧಿ ಇಲ್ಲದೇ ತಿಪ್ಪೆಗೆ ತುಳಿಯುವಂತಾಗಿದೆ. ಅಲ್ಪಸ್ವಲ್ಪ ಚೆನ್ನಾಗಿರುವ ಫಸಲನ್ನು ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲತಾಗಿದೆ’ ಎಂದು ರೈತ ಆದೇಶ ಅಳಲು ತೋಡಿಕೊಂಡರು.

ಅತಿವೃಷ್ಟಿಯಿಂದ ಸಂಭವಿಸಿರುವ ಬೆಳೆಹಾನಿಯ ಕುರಿತು ಸರ್ಕಾರ ವೈಜ್ಞಾನಿಕ ಸಮೀಕ್ಷೆ ನಡೆಸಿ, ಗರಿಷ್ಠ ಪರಿಹಾರ ನೀಡಬೇಕು ಎಂದು ಇಟ್ಟಿಗಿ ರೈತರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)