ಗುರುವಾರ , ಮೇ 26, 2022
27 °C
ಹೂವಿನಹಡಗಲಿ ತಾಲ್ಲೂಕಿನಲ್ಲಿ 961 ಹೆಕ್ಟೇರ್ ಬೆಳೆ ಹಾನಿ

ಈರುಳ್ಳಿ ಬೆಳೆಗಾರರಿಗೆ ಪರಿಹಾರ ಮರೀಚಿಕೆ

ಕೆ.ಸೋಮಶೇಖರ್‌ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಕಳೆದ ಮುಂಗಾರು ಋತುವಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಗೀಡಾಗಿದ್ದು, ರೈತರಿಗೆ ಪರಿಹಾರ ಮರೀಚಿಕೆಯಾಗಿದೆ.

ತಾಲ್ಲೂಕಿನಲ್ಲಿ ಬಹು ವರ್ಷಗಳಿಂದ ಈರುಳ್ಳಿ ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲದ ದುಸ್ಥಿತಿಗೆ ರೋಸಿ ಹೋಗಿರುವ ರೈತರು ‘ಈರುಳ್ಳಿಯ ಸಹವಾಸವೇ ಸಾಕು’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸತತ ಎರಡು ವರ್ಷ ಈರುಳ್ಳಿ ಬೆಳೆಗೆ ಕೊಳೆರೋಗ ಬಾಧಿಸಿದೆ. ಬೆಳೆ ನಿರ್ವಹಣೆಗೆ ಮಾಡಿದ ಖರ್ಚು ಹಿಂತಿರುಗದೇ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಹಿಂದಿನ ವರ್ಷ ಸರ್ಕಾರ ಅಲ್ಪ ಪರಿಹಾರ ನೀಡಿ ರೈತರಿಗೆ ಆಸರೆಯಾಗಿತ್ತು. ಈ ಬಾರಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಆಗಲೇ ಪರಿಹಾರ ವಿತರಣೆಯಾಗಿದ್ದು, ಹೂವಿನಹಡಗಲಿ ತಾಲ್ಲೂಕಿಗೆ ಪರಿಹಾರ ಬಿಡುಗಡೆಗೊಳಿಸದೇ ಸರ್ಕಾರ ತಾರತಮ್ಯ ಮಾಡಿದೆ ಎಂದು ರೈತರು ದೂರುತ್ತಿದ್ದಾರೆ.

ಕಳೆದ ಮುಂಗಾರಿನಲ್ಲಿ ಇಟ್ಟಿಗಿ ಹೋಬಳಿಯ ಇಟ್ಟಿಗಿ, ಉತ್ತಂಗಿ, ತಳಕಲ್ಲು, ಕೆಂಚಮ್ಮನಹಳ್ಳಿ, ಮಹಾಜನದಳ್ಳಿ, ಮುಸುಕಿನ ಕಲ್ಲಹಳ್ಳಿ, ಸೋಗಿಯಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಹಿರೇಹಡಗಲಿ ಹೋಬಳಿಯೂ ಸೇರಿದಂತೆ ತಾಲ್ಲೂಕಿನಲ್ಲಿ ಕಳೆದ ಮುಂಗಾರಿನಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ನಿರಂತರ ಮಳೆ, ಮೋಡ ಕವಿದ ವಾತಾವರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಈರುಳ್ಳಿಗೆ ಕೊಳೆರೋಗ ವ್ಯಾಪಿಸಿ, ಸಂಪೂರ್ಣ ಬೆಳೆ ಹಾನಿ ಸಂಭವಿಸಿತ್ತು.

ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕಿನಲ್ಲಿ ಜಂಟಿ ಸಮೀಕ್ಷೆ ನಡೆಸಿ 1,221 ಜನ ರೈತರ 961 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆಯು ಕೊಳೆರೋಗದಿಂದ ಹಾನಿಗೀಡಾಗಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿತ್ತು. ಬೆಳೆಹಾನಿ ಸಂತ್ರಸ್ತರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿತ್ತು. ಪರಿಹಾರದ ಹಣ ಮಾತ್ರ ರೈತರಿಗೆ ಇನ್ನೂ ವಿತರಣೆ ಆಗಿಲ್ಲ.

‘ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹1 ಲಕ್ಷ ಖರ್ಚು ಮಾಡಿದ್ದೆವು. ಕೊಳೆರೋಗದಿಂದ ಸಂಪೂರ್ಣ ಬೆಳೆ ಹಾಳಾಗಿ ಒಂದು ರೂಪಾಯಿ ಆದಾಯವೂ ಕೈ ಸೇರಿಲ್ಲ. ಸತತ ಎರಡು ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಆದರೆ, ಕೃಷಿ ಉತ್ಪನ್ನಗಳಿಗೆ ಬೆಲೆಯೇ ಇಲ್ಲವಾಗಿದೆ’ ಎಂದು ಇಟ್ಟಿಗಿಯ ರೈತ ರಾಜಶೇಖರ್ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು