ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಟರ್ ಮೈಂಡ್’ ಸ್ಪರ್ಧಾತ್ಮಕ ಪರೀಕ್ಷೆಯ ಆನ್‌ಲೈನ್‌ ಪತ್ರಿಕೆ ಬಿಡುಗಡೆ

‘ಮಾಸ್ಟರ್ ಮೈಂಡ್’ ಸ್ಪರ್ಧಾತ್ಮಕ ಪರೀಕ್ಷೆಯ ಆನ್‌ಲೈನ್‌ ಪತ್ರಿಕೆ ಬಿಡುಗಡೆ ಸಮಾರಂಭ
Last Updated 28 ಸೆಪ್ಟೆಂಬರ್ 2021, 11:22 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ‘ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎನ್ನುವವರಲ್ಲಿ ಮಾನಸಿಕ ಮತ್ತು ದೈಹಿಕ ಸಿದ್ಧತೆ ಬಹಳ ಅತ್ಯಗತ್ಯ’ ಎಂದು ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದರು.

ಮಂಗಳವಾರ ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ನಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ರೂಪಿಸಿರುವ ದ್ವಿಭಾಷಾ ಆನ್‌ಲೈನ್‌ ಪತ್ರಿಕೆ 'ಮಾಸ್ಟರ್‌ಮೈಂಡ್' ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಪರೀಕ್ಷಾರ್ಥಿಗಳಿಗೆ ತಮ್ಮ ದಾರಿ ಆಯ್ದುಕೊಳ್ಳುವ ಪ್ರಬುದ್ಧತೆ ಬರಬೇಕು. ನಾವು ಬಳಸುವ ಡಿಜಿಟಲ್‌ ಮಾಧ್ಯಮದಿಂದ ನಮಗೆ ಎಷ್ಟು ಲಾಭ ಎನ್ನುವುದನ್ನು ತಿಳಿದುಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಯೋಗ, ಧ್ಯಾನ ಮಾಡಿ ಹೆಚ್ಚು ಸಕ್ರಿಯರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ದಿನಪತ್ರಿಕೆಯನ್ನು ಓದುವುದಕ್ಕೆ ವಿಶೇಷ ಮಾದರಿ ಇದೆ. ಅದನ್ನು ವಿದ್ಯಾರ್ಥಿಗಳು ಈಗಿನಿಂದಲೇ ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಕಾರಿಯಾಗುತ್ತದೆ. ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಡಿಜಿಟಲ್ ಕೈಪಿಡಿ ತುಂಬಾ ಉಪಯುಕ್ತವಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಸಹಾಯಕವಾಗುತ್ತದೆ. ಪರೀಕ್ಷಾ ಆಕಾಂಕ್ಷಿಗಳು ಡಿಜಿಟಲ್ ಕಲಿಕೆಯಲ್ಲಿ ತೊಡಗಿದಾಗ ನಿಮ್ಮ ಗಮನ ಬೇರೆ ಕಡೆ ಹೋಗಬಾರದು. ಅಸಂಖ್ಯಾತ ಸಾಮಾಜಿಕ ಜಾಲತಾಣಗಳಿದ್ದು, ಕೇವಲ ಮನರಂಜನೆಗೆ ಉಪಯೋಗಿಸುತ್ತಾ ಸಮಯ ಹಾಳು ಮಾಡಿಕೊಳ್ಳಬಾರದು’ ಎಂದು ತಿಳಿಸಿದರು.

‘ದಿನಪತ್ರಿಕೆ ಓದುವ ಸಮಯದಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವುದರ ಅರಿವು ನಮಗಿರಬೇಕು. ಬಹುಮುಖ್ಯವಾಗಿ ವಿದ್ಯಾರ್ಥಿಗಳು ಸಂಪಾದಕೀಯ ಪುಟವನ್ನು ಲಕ್ಷ್ಯಕೊಟ್ಟು ಓದಬೇಕು. ಪ್ರಚಲಿತ ವಿದ್ಯಮಾನಗಳ ಅಂಕಣ, ಸಂಪಾದಕೀಯ, ಪರೀಕ್ಷೆಯಲ್ಲಿ ಬಹಳ ನೆರವಿಗೆ ಬರುತ್ತದೆ. ಓದು ಕೇವಲ ಪರೀಕ್ಷೆಗೆ ಸೀಮಿತಗೊಳಿಸದೆ ಕೌಶಲ ಕಲಿಕೆಗೆ ಬಳಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಸೂಕ್ಷ್ಮ ಅಧ್ಯಯನದ ಜೊತೆಗೆ ಪರಿಶ್ರಮ ಅತ್ಯಗತ್ಯ. ಪರೀಕ್ಷೆಗಳಲ್ಲಿ ಯಶಸ್ಸು ಕಂಡು ಉನ್ನತ ಹುದ್ದೆಗೇರಿದ ಸಾಧಕ ಅಧಿಕಾರಿಗಳ ಅಧ್ಯಯನ ಅನುಭವಗಳನ್ನು ಪಡೆದುಕೊಂಡಾಗ ಆಕಾಂಕ್ಷಿಗಳಿಗೆ ಅದು ಸಹಾಯಕವಾಗುತ್ತದೆ. ಅದರ ಜೊತೆಗೆ ಉತ್ತಮ ಸಲಹೆ, ಮಾರ್ಗದರ್ಶನ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಆಕಾಂಕ್ಷಿಗಳು ಶ್ರಮಿಸಬೇಕು’ ಎಂದು ತಿಳಿಸಿದರು.

‘ಪ್ರಜಾವಾಣಿ’ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್.ಶೆಂಬೆಳ್ಳಿ ಮಾತನಾಡಿ, ‘ಆನ್‌ಲೈನ್‌ ಪತ್ರಿಕೆಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ತಜ್ಞರಿಂದ ರೂಪಿಸಿರುವ ಈ ಪತ್ರಿಕೆಯು ಮಾಹಿತಿ ಕಣಜವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ನಿರ್ದಿಷ್ಟ ಗುರಿ ಹೊಂದಿ ಅಧ್ಯಯನ ನಡೆಸುತ್ತಿರುವ ಆಕಾಂಕ್ಷಿಗಳು ಇದನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.

ಪತ್ರಿಕೆಯ ಪ್ರಸರಣ ವಿಭಾಗದ ಪ್ರತಿನಿಧಿ ಎಸ್‌. ಸಂತೋಷ್‌ ಕುಮಾರ್‌, ಜಾಹೀರಾತು ವಿಭಾಗದ ಪ್ರತಿನಿಧಿ ಸತೀಶ್‌ ಬಿ. ಮುರಾಳ, ಛಾಯಾಗ್ರಾಹಕರಾದ ಅಭಿಷೇಕ್‌ ಸಿ., ಲವ, ಕೆ. ಪವನ್‌ ಕುಮಾರ್‌, ಪ್ರಾಧ್ಯಾಪಕ ಟಿ.ಎಚ್‌. ಬಸವರಾಜ, ಕೆ. ವೆಂಕಟೇಶ್‌, ಗದಿಗೇಶ್‌, ವಾರಣಿ, ಮೇಘನಾ, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ
ವಿಶೇಷ ಅಧಿಕಾರಿ ಅನಿರುದ್ಧ್ ಪಿ. ಶ್ರವಣ್ ಅವರಿಗೆ ಕೆಲ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಕಂಡುಕೊಂಡರು. ಬಿಎಸ್ಸಿ ವಿದ್ಯಾರ್ಥಿ ಕಾರ್ತಿಕ್, ‘ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗೆ ಎನ್‌ಸಿಇಆರ್‌ಟಿ ಪಠ್ಯ ಓದಬೇಕು. ಆದರೆ, ಮುಖ್ಯ ಪರೀಕ್ಷೆಗೆ ಯಾವ ಪಠ್ಯ ಓದಬೇಕು’ ಎಂದು ಕೇಳಿದರು. ‘ಮುಖ್ಯಪರೀಕ್ಷೆಗೆ ವಿಷಯಾಧಾರಿತ ಅಧ್ಯಯನ ಹೆಚ್ಚು ಅವಶ್ಯಕ. ಮುಖ್ಯ ಪರೀಕ್ಷೆಯಲ್ಲಿ ಯಾವ ವಿಷಯ ಆಯ್ದುಕೊಳ್ಳುತ್ತೇವೆ. ಆ ವಿಷಯದ ಕುರಿತು ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿ ಓದಬೇಕು’ ಎಂದು ಅನಿರುದ್ಧ್‌ ಶ್ರವಣ್‌ ತಿಳಿಸಿದರು.

ಚಂದಾದಾರರಾಗಲು ಹೀಗೆ ಮಾಡಿ
ಸ್ಪರ್ಧಾತ್ಮಕ ಪರೀಕ್ಷೆಗಳ ‘ಮಾಸ್ಟರ್‌ಮೈಂಡ್‌’ ಆನ್‌ಲೈನ್‌ ಪತ್ರಿಕೆಯ ಚಂದಾದಾರರಾಗ ಬಯಸುವವರು ಈ ವೆಬ್‌ಸೈಟ್‌ಗೆ https://bit.ly/emmstudent ಭೇಟಿ ಕೊಟ್ಟು ಸದಸ್ಯತ್ವ ಪಡೆಯಬಹುದು. ಹೆಚ್ಚಿನ ಮಾಹಿತಿಗೆ: ‘ಪ್ರಜಾವಾಣಿ’ ಪ್ರಸರಣ ವಿಭಾಗದ ಪ್ರತಿನಿಧಿ ಎಸ್‌. ಸಂತೋಷ್‌ ಕುಮಾರ್‌ ಮೊಬೈಲ್‌ ಸಂಖ್ಯೆ: 9902751468 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT