ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಮೆಟ್ಟಿ ನಿಂತ ಬಳ್ಳಾರಿಯ ದಾದಾ ಕಲಂದರ್

ರಾಷ್ಟ್ರೀಯ ಪ್ಯಾರಾ ವಾಲಿಬಾಲ್ ಟೂರ್ನಿಯಲ್ಲಿ ಮಿಂಚಿದ ಮಲ್ಲಿಗೆ ನಾಡಿನ ಹುಡುಗ
Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಅಂಗವೈಕಲ್ಯವನ್ನೇ ಸಾಧನೆಯ ಮೆಟ್ಟಿಲು ಮಾಡಿಕೊಂಡಿರುವ ಮಲ್ಲಿಗೆ ನಾಡಿನ ಹುಡುಗ ದಫೇದಾರ್ ದಾದಾ ಕಲಂದರ್ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಿದ್ದಾರೆ.

ಹೋದ ವರ್ಷ ಥಾಯ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ವಾಲಿಬಾಲ್ (ಸಿಟ್ಟಿಂಗ್) ಪಂದ್ಯಾವಳಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿ ಉತ್ತಮ ಆಟವಾಡಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪಟ್ಟಣದ ರಾಜೀವ್ ನಗರದ ನಿವಾಸಿ ದಫೇದಾರ್ ರಾಜಾಸಾಬ್, ಮರೆಂಬೀ ದಂಪತಿಯ ಪುತ್ರ ದಾದಾ ಕಲಂದರ್ ಅಂಗವೈಕಲ್ಯಕ್ಕೆ ತುತ್ತಾಗಿದ್ದರೂ ವಾಲಿಬಾಲ್, ಕ್ರಿಕೆಟ್, ಕಬಡ್ಡಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದಾರೆ.

2013ರಲ್ಲಿ ಬೆಂಗಳೂರಿನ ಪ್ಯಾರಾ ಒಲಿಂಪಿಕ್ ಕಮಿಟಿ ಮತ್ತು ರಾಜ್ಯ ಪ್ಯಾರಾ ವಾಲಿಬಾಲ್ ಫೆಡರೇಷನ್ ನಡೆಸಿದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ, ರಾಜ್ಯ ಮಟ್ಟದ ಪ್ಯಾರಾ ವಾಲಿಬಾಲ್ ತಂಡಕ್ಕೆ ಆಯ್ಕೆಯಾದರು. ಅಲ್ಲಿಂದ ಅವರ ಕ್ರೀಡಾ ಬದುಕು ಹೊಸ ರೂಪ ಪಡೆಯಿತು.

2013ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸಿಟಿಂಗ್ ಪ್ಯಾರಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಅವರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾವಳಿಯಲ್ಲಿ ಹರಿಯಾಣ ವಿರುದ್ಧ ರಾಜ್ಯ ತಂಡ ಪ್ರಥಮ ಸ್ಥಾನ ಪಡೆದಿತ್ತು. 2014ರಲ್ಲಿ ದೇವನಹಳ್ಳಿಯಲ್ಲಿ, 2015ರಲ್ಲಿ ತಮಿಳುನಾಡಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಟ್ಯಾಂಡಿಂಗ್ ಪ್ಯಾರಾ ವಾಲಿಬಾಲ್ ಟೂರ್ನಿಯಲ್ಲಿಯೂ ರಾಜ್ಯ ತಂಡ ಗೆಲುವು ದಾಖಲಿಸಿತ್ತು. 2017ರಲ್ಲಿ ರಾಜಸ್ತಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಗಳಿಸಿತ್ತು. ಈ ಎಲ್ಲ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದ ಗ್ರಾಮೀಣ ಪ್ರತಿಭೆ ದಾದಾ ಕಲಂದರ್ ಗಮನ ಸೆಳೆಯುವ ಆಟವಾಡಿ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು.

ಅಂತರ ರಾಷ್ಟ್ರೀಯ (ಸಿಟ್ಟಿಂಗ್) ಪ್ಯಾರಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಇವರು ಭಾರತ ತಂಡ ಪ್ರತಿನಿಧಿಸಿದ್ದಾರೆ. ಕುಳಿತಲ್ಲೇ ಬಾಲ್ ಸರ್ವೀಸ್ ಮಾಡುವ ಇವರ ಅಮೋಘ ಆಟವನ್ನು ಕ್ರೀಡಾಪ್ರೇಮಿಗಳು ಮೆಚ್ಚಿಕೊಂಡಿದ್ದರು. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಥಾಯ್ಲೆಂಡ್‌ ವಿರುದ್ಧ ಪರಾಭವಗೊಂಡಿತ್ತು. ಈಚೆಗೆ ಮಂಗಳೂರಿನಲ್ಲಿ ನಡೆದ ಮೊದಲ ಬೀಚ್ ಪ್ಯಾರಾ ವಾಲಿಬಾಲ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿಯೂ ಅವರು ಭಾರತ ತಂಡ ಪ್ರತಿನಿಧಿಸಿದ್ದರು.

ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಓಡಾಡಿಕೊಂಡು ಬೆಳೆದ ದಾದಾ ಕಲಂದರ್ ಒಂಭತ್ತು ವರ್ಷದವನಿರುವಾಗ ಜ್ವರ ಕಾಣಿಸಿಕೊಂಡಿದ್ದೇ ನೆಪವಾಗಿ ಇಡೀ ದೇಹ ಸ್ವಾಧೀನ ಕಳೆದುಕೊಂಡಿತ್ತು. ನಿರಂತರ ಚಿಕಿತ್ಸೆಯ ಫಲವಾಗಿ ದೇಹ ಚೇತರಿಸಿಕೊಂಡರೂ ಎಡ ಕಾಲಿಗೆ ಸ್ವಾಧೀನವೇ ಬರಲಿಲ್ಲ. ಒಂದೇ ಕಾಲಿನ ಮೇಲೆ ಭಾರ ಹಾಕಿ ಓಡಾಡುತ್ತಿದ್ದ ಮಗನನ್ನು ಹೆತ್ತವರು ಅತಿ ಜಾಗರೂಕತೆಯಿಂದ ಬೆಳೆಸಿದರು.

ಕಲಂದರ್ ಗೆ ಶಾಲಾ ದಿನಗಳಿಂದಲೂ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಅಂಗವೈಕಲ್ಯತೆ ಇದ್ದರೂ ಸಾಮಾನ್ಯರ ಜತೆ ಪೈಪೋಟಿ ಒಡ್ಡುವ ರೀತಿಯನ್ನು ಕಂಡು ದೈಹಿಕ ಶಿಕ್ಷಣ ಶಿಕ್ಷಕರು ಈತನಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಆದರೆ, ಕ್ರೀಡೆಯಲ್ಲಿ ಪಾಲ್ಗೊಳ್ಳಲು ಮನೆಯಲ್ಲಿ ವಿರೋಧವಿತ್ತು. ತಂದೆಯಿಂದ ಸಾಕಷ್ಟು ಬಾರಿ ಪೆಟ್ಟು ತಿಂದರೂ ಅವರ ಕಣ್ಣು ತಪ್ಪಿಸಿ ಕ್ರಿಕೆಟ್, ವಾಲಿಬಾಲ್ ಅಂಕಣದಲ್ಲಿ ಇರುತ್ತಿದ್ದ ಹುಡುಗ ಇಂದು ಹೆತ್ತವರು ಹೆಮ್ಮೆ ಪಡುವ ರೀತಿಯಲ್ಲಿ ಕ್ರೀಡಾ ಸಾಧನೆ ಮಾಡಿದ್ದಾರೆ. ಆತ್ಮವಿಶ್ವಾಸ, ಸಾಧಿಸುವ ಛಲ ಇದ್ದರೆ ಅಂಗವೈಕಲ್ಯ ಅಡ್ಡಿ ಬರುವುದಿಲ್ಲ ಎಂದು ಅವರು ನಿರೂಪಿಸಿದ್ದಾರೆ.

‘ಕಾಲು ಊನವಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರಾದ ಸ್ವಾಮಿನಾಥ, ರಫೀಕ್ ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ರಾಷ್ಟ್ರ, ಅಂತರ ರಾಷ್ಟ್ರೀಯ ಪಂದ್ಯಾವಳಿಗೆ ಹೋಗುವಾಗಲೆಲ್ಲಾ ನನ್ನ ಬಂಧುಗಳು, ಸ್ನೇಹಿತರು, ಕ್ರೀಡಾಪ್ರೇಮಿಗಳು ನೆರವು ನೀಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಕಲಂದರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT