ಮಂಗಳವಾರ, ಅಕ್ಟೋಬರ್ 27, 2020
24 °C
ಮಳೆಗೆ ಮೇಲಿಂದ ಮೇಲೆ ಹಾಳಾಗುತ್ತಿರುವ ರಸ್ತೆ; ಬ್ಯಾಟರಿ ವಾಹನ ಸಂಚಾರಕ್ಕೆ ತೊಡಕು

ವಿಜಯ ವಿಠ್ಠಲಕ್ಕೆ ಪರ್ಯಾಯ ಮಾರ್ಗ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ಪ್ರವಾಸಿಗರು ತೆರಳಲು ಪರ್ಯಾಯ ಮಾರ್ಗ ನಿರ್ಮಿಸಲು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರ ಚಿಂತನೆ ನಡೆಸಿದೆ.

ಗೆಜ್ಜಲ ಮಂಟಪ ಬಳಿಯ ಅರಳಿ ಮರದಿಂದ ವಿಜಯ ವಿಠ್ಠಲ ದೇವಸ್ಥಾನ ಸಮೀಪವಿರುವ ಶಿವ ದೇಗುಲದವರೆಗೆ ಹೊಸ ಮಾರ್ಗ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಆದರೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಇನ್ನಷ್ಟೇ ಅನುಮತಿ ಪಡೆಯಬೇಕಿದೆ.

ವಿಜಯ ವಿಠ್ಠಲ ದೇಗುಲಕ್ಕೆ ಹೋಗಲು ಈಗಿರುವ ಹಾಲಿ ರಸ್ತೆ ಕಚ್ಚಾ ಮಣ್ಣಿನಿಂದ ಕೂಡಿದೆ. ಸ್ವಲ್ಪ ಮಳೆ ಬಂದರೂ ಗುಂಡಿಗಳು ನಿರ್ಮಾಣವಾಗುತ್ತವೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಸದ್ಯ ಅಪಾರ ಗುಂಡಿಗಳು ಬಿದ್ದಿದ್ದು, ಕಿರಿದಾದ ರಸ್ತೆಯಲ್ಲಿ ಬ್ಯಾಟರಿಚಾಲಿತ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಹಲವು ಸಲ ಬ್ಯಾಟರಿ ವಾಹನ ರಸ್ತೆಬದಿ ಉರುಳಿ ಬಿದ್ದು, ಅದರ ಚಾಲಕರು, ಪ್ರವಾಸಿಗರು ಗಾಯಗೊಂಡಿರುವ ನಿದರ್ಶನಗಳಿವೆ.

ಈಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಬ್ಯಾಟರಿ ವಾಹನಗಳನ್ನು ಓಡಿಸುವುದು ಪ್ರಾಧಿಕಾರಕ್ಕೆ ಅನಿವಾರ್ಯವಾಗಿದೆ. ಪ್ರಾಧಿಕಾರದ ಸಿಬ್ಬಂದಿ ಮಣ್ಣಿನಿಂದ ಗುಂಡಿಗಳನ್ನು ಮುಚ್ಚಿ, ತಾತ್ಕಾಲಿಕವಾಗಿ ಪರಿಹಾರ ಕಂಡುಕೊಂಡಿದ್ದಾರೆ. ಆದರೆ, ಮಳೆ ಬಂದಾಗ ಪ್ರತಿ ಸಲ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊಸ ಮಾರ್ಗ ನಿರ್ಮಾಣಕ್ಕೆ ಪ್ರಾಧಿಕಾರ ಗಂಭೀರ ಚಿಂತನೆ ನಡೆಸಿದೆ.

‘ವಿಜಯ ವಿಠ್ಠಲ ದೇಗುಲಕ್ಕೆ ಹೋಗುವ ಮಾರ್ಗ ಕಚ್ಚಾ ಮಣ್ಣಿನಿಂದ ಕೂಡಿದೆ. ಸ್ವಲ್ಪ ಜೋರು ಮಳೆ ಬಂದರೂ ಗುಂಡಿಗಳು ನಿರ್ಮಾಣವಾಗುತ್ತವೆ. ಇನ್ನಷ್ಟೇ ಆ ಮಾರ್ಗದಡಿ ಉತ್ಖನನ ನಡೆಯಬೇಕಿರುವುದರಿಂದ ಪಕ್ಕಾ ರಸ್ತೆ ನಿರ್ಮಿಸಲು ಆಗುವುದಿಲ್ಲ. ಅದರ ಬದಲು ಗೆಜ್ಜಲ ಮಂಟಪದಿಂದ ಶಿವ ದೇಗುಲದ ವರೆಗೆ ನೇರವಾಗಿ ಹೋಗಲು ಕಚ್ಚಾ ರಸ್ತೆಯಿದ್ದು, ಅದನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಆ ರಸ್ತೆ ನಿರ್ಮಿಸಿದರೆ ಪ್ರವಾಸಿಗರ ವಾಹನ ನಿಲುಗಡೆಗೂ ಅನುಕೂಲವಾಗಲಿದೆ’ ಎಂದು ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈ ಕುರಿತು ಇನ್ನಷ್ಟೇ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕಿದೆ. ಎಲ್ಲ ಸಾಧಕ–ಬಾಧಕ ನೋಡಿಕೊಂಡು ಮುಂದುವರೆಯಲಾಗುವುದು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
 

ವಿಜಯ ವಿಠ್ಠಲಕ್ಕೆ ಯಾಕಿಷ್ಟು ಮಹತ್ವ?:

ವಿಶಿಷ್ಟ ವಾಸ್ತುಶಿಲ್ಪದ ಕೆತ್ತನೆ ಹೊಂದಿರುವ ವಿಜಯ ವಿಠ್ಠಲ ದೇವಸ್ಥಾನ ಹಂಪಿಯಲ್ಲಿರುವ ಅಪರೂಪದ ಸ್ಮಾರಕಗಳಲ್ಲಿ ಒಂದು. ಆ ದೇವಸ್ಥಾನದ ಕಂಬಗಳಿಂದ ಸಂಗೀತ ಸ್ವರಗಳು ಹೊರಹೊಮ್ಮುತ್ತವೆ. ಒಂದೇ ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಕಲ್ಲಿನ ರಥ ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತದೆ. ಪ್ರವಾಸಿಗರು ಹಂಪಿಯಲ್ಲಿ ಏನು ನೋಡದಿದ್ದರೂ ತಪ್ಪದೇ ವಿಜಯ ವಿಠ್ಠಲ ದೇಗುಲಕ್ಕೆ ಭೇಟಿ ಕೊಡುತ್ತಾರೆ.

ಯುನೆಸ್ಕೊ ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಹೀಗಾಗಿಯೇ ಇದರ ಪರಿಸರದಲ್ಲಿ ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಬ್ಯಾಟರಿಚಾಲಿತ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

***

ವಿಜಯ ವಿಠ್ಠಲಕ್ಕೆ ಹೋಗುವ ರಸ್ತೆಯ ಕೆಳಭಾಗದಲ್ಲಿ ಪ್ರಾಚೀನ ಮಾರ್ಗವಿದೆ. ಈಗಿರುವ ರಸ್ತೆ ಬದಲು ಹೊಸ ರಸ್ತೆ ನಿರ್ಮಿಸುವ ಯೋಜನೆ ಇದೆ.
-ಪಿ.ಎನ್‌. ಲೋಕೇಶ್‌, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು