ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ವ್ಯವಸ್ಥೆಗೆ ಆಗಬೇಕಿದೆ ಸರ್ಜರಿ; ಬಹುತೇಕ ಕಡೆ ಬೇಕಾಬಿಟ್ಟಿ ನಿಲುಗಡೆ

ಬೆರಳೆಣಿಕೆ ರಸ್ತೆಗಳಲ್ಲಿ ಕಟ್ಟುನಿಟ್ಟಿನ ನಿಯಮ ಅನುಷ್ಠಾನ
Last Updated 20 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇನ್ನಷ್ಟೇ ಪರಿಣಾಮಕಾರಿ, ಶಿಸ್ತುಬದ್ಧ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ಬರಬೇಕಿದೆ. ಈಗಿನ ವ್ಯವಸ್ಥೆ ನೋಡಿದರೆ ಅದಕ್ಕೆ ‘ಮೇಜರ್‌ ಸರ್ಜರಿ’ ಆಗುವ ಅಗತ್ಯ ಎಂತಹವರಿಗೂ ಮನಗಾಣುತ್ತದೆ.

ನಗರದ ಕಾಲೇಜು ರಸ್ತೆ, ಮೇನ್‌ ಬಜಾರ್‌, ಪುಣ್ಯಮೂರ್ತಿ ವೃತ್ತ ಹೊರತುಪಡಿಸಿದರೆ ಬಹುತೇಕ ರಸ್ತೆಗಳಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಸಂಚಾರ ಪೊಲೀಸರು ಎಲ್ಲ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳ ನಿಲುಗಡೆ ಕುರಿತು ಸಂಕೇತ ಫಲಕಗಳನ್ನು ಅಳವಡಿಸಿದ್ದಾರೆ. ಆದರೆ, ಸಾರ್ವಜನಿಕರು ಅದನ್ನು ಪಾಲಿಸುತ್ತಿಲ್ಲ.

ಮೇನ್‌ ಬಜಾರ್‌, ಪುಣ್ಯಮೂರ್ತಿ ವೃತ್ತ ಹಾಗೂ ಕಾಲೇಜು ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಅಲ್ಲಿ ಸದಾ ಮೂರ್ನಾಲ್ಕು ಜನ ಸಂಚಾರ ಪೊಲೀಸರು ಇರುತ್ತಾರೆ. ಅವರಿಗೆ ಹೆದರಿಕೊಂಡು ವಾಹನಗಳ ಮಾಲೀಕರು ನಿಗದಿತ ಸ್ಥಳದಲ್ಲಿ ಪಾರ್ಕಿಂಗ್‌ ಮಾಡುತ್ತಾರೆ. ಆದರೆ, ಬೇರೆ ಕಡೆಗಳಲ್ಲಿ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ.

ರೈಲು ನಿಲ್ದಾಣ ರಸ್ತೆ, ಬಸ್‌ ನಿಲ್ದಾಣದ ಎರಡೂ ಬದಿಯ ರಸ್ತೆಗಳು, ಬಳ್ಳಾರಿ ರಸ್ತೆ, ಹಂಪಿ ರಸ್ತೆ, ವಾಲ್ಮೀಕಿ ವೃತ್ತ, ಟಿ.ಬಿ. ಡ್ಯಾಂ ರಸ್ತೆ, ಸೋಗಿ ಮಾರುಕಟ್ಟೆ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದಾಗಿ ಸದಾ ವಾಹನ ದಟ್ಟಣೆ ಉಂಟಾಗುತ್ತದೆ.

ಬಸ್‌ ನಿಲ್ದಾಣ, ಹಂಪಿ ರಸ್ತೆ, ರೈಲು ನಿಲ್ದಾಣ ರಸ್ತೆಗಳಲ್ಲಿ ಹಲವೆಡೆ ಪಾದಚಾರಿ ಮಾರ್ಗ ಅತಿಕ್ರಮಿಸಲಾಗಿದೆ. ಜನ ಕೂಡ ರಸ್ತೆಗಳ ಮೇಲೆಯೇ ನಡೆದಾಡಿಕೊಂಡು ಹೋಗುವ ಪರಿಸ್ಥಿತಿ ಇದೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಕಾಲೇಜು ರಸ್ತೆ, ಮೇನ್‌ ಬಜಾರ್‌ನಂತೆ ಬೇರೆ ರಸ್ತೆಗಳಲ್ಲಿಯೂ ಹೆಚ್ಚಿನ ಸಂಚಾರ ಪೊಲೀಸರನ್ನು ನಿಯೋಜಿಸಿ, ನಿಯಮ ಮೀರಿದವರ ವಿರುದ್ಧ ದಂಡ ಹಾಕಿದರೆ ಪರಿಸ್ಥಿತಿ ಸರಿ ಹೋಗಬಹುದು ಎನ್ನುತ್ತಾರೆ ಸಾರ್ವಜನಿಕರು.

ಹಲವೆಡೆ ರಸ್ತೆಗಳು ಕಿರಿದಾಗಿವೆ. ಅಲ್ಲಿ ಎದುರು ಬದುರಾಗಿ ವಾಹನಗಳು ಓಡಾಡುತ್ತವೆ. ಅಂತಹ ಕಡೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವುದು ಕಷ್ಟ. ಹೆಚ್ಚು ಜನದಟ್ಟಣೆ ಇರುವ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದರೆ ಪಾರ್ಕಿಂಗ್‌ ಸಮಸ್ಯೆ ನೀಗಬಹುದು. ಆ ನಿಟ್ಟಿನಲ್ಲಿ ಸಂಚಾರ ಪೊಲೀಸರು ಯೋಜನೆ ರೂಪಿಸಿ, ಕ್ರಮ ಕೈಗೊಳ್ಳಬೇಕಿದೆ.

ನಗರದಲ್ಲಿನ ಹೆಚ್ಚಿನ ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ವಾಹನಗಳ ನಿಲುಗಡೆಯ ವ್ಯವಸ್ಥೆಯೇ ಇಲ್ಲ. ಖರೀದಿಗೆ ಬಂದ ಜನ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗುತ್ತಾರೆ. ಹಬ್ಬದ ಸಂದರ್ಭದಲ್ಲಂತೂ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.

ಸಿಕ್ಕ, ಸಿಕ್ಕಲ್ಲಿ ವಾಹನ ನಿಲುಗಡೆ

ಕೂಡ್ಲಿಗಿ: ಪಟ್ಟಣದಲ್ಲಿ ಎಲ್ಲೂ ಕೂಡ ನಿಗದಿತ ಪಾರ್ಕಿಂಗ್ ಜಾಗವಿಲ್ಲ. ವಾಹನಗಳನ್ನು ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ನಿಲ್ಲಿಸಲಾಗುತ್ತದೆ. ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ಪಟ್ಟಣದ ಬೆಂಗಳೂರು ರಸ್ತೆ, ಪಾದಗಟ್ಟೆ, ಮದಕರಿ ವೃತ್ತ, ಹೊಸಪೇಟೆ ರಸ್ತೆ, ಕೊಟ್ಟೂರು ರಸ್ತೆ, ಸಂಡೂರು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ತಾಲ್ಲೂಕು ಕೇಂದ್ರವಾಗಿರುವ ಪಟ್ಟಣಕ್ಕೆ ಗ್ರಾಮೀಣ ಭಾಗ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳ ಗಡಿ ಭಾಗದ ಊರುಗಳ ಸಾವಿರಾರು ಜನರು ಕಚೇರಿ ಕೆಲಸ ಸೇರಿದಂತೆ ವ್ಯವಹಾರಗಳಿಗೆ ತಮ್ಮ ವಾಹನಗಳೊಂದಿಗೆ ಪಟ್ಟಣಕ್ಕೆ ಬರುತ್ತಾರೆ. ಆದರೆ, ವಾಹನಗಳ ನಿಲುಗಡೆಗೆ ಎಲ್ಲಿಯೂ ಸರಿಯಾದ ಸ್ಥಳಾವಕಾಶ ಇಲ್ಲ. ಹೀಗಾಗಿ ಬೇಕಾಬಿಟ್ಟಿ ನಿಲ್ಲಿಸುತ್ತಾರೆ.
ಪಟ್ಟಣದ ಕೆಲ ರಸ್ತೆಗಳನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಬಹುತೇಕ ರಸ್ತೆಗಳ ಒಂದು ಬದಿಯಲ್ಲಿ ಯಾವಾಗಲು ವಾಹನಗಳು ನಿಲ್ಲುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮುಂದೆ ಓಡದೆ ಒಂದರ ಹಿಂದೆ ಒಂದು ಸಾಗಬೇಕಾದ ಅನಿವಾರ್ಯತೆ ಇದೆ.

‘ರಾಜ್ಯ ಹೆದ್ದಾರಿಯೇ ವಾಹನಗಳ ನಿಲ್ದಾಣ’

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ವಾಹನಗಳ ನಿಲುಗಡೆಯೇ ತಾಲ್ಲೂಕು ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ.ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ ಪುರಸಭೆ ಇದುವರೆಗೆ ವಾಹನಗಳ ನಿಲುಗಡೆಗೆ ಕ್ರಮ ಕೈಗೊಂಡಿಲ್ಲ. ಜನದಟ್ಟಣೆ ಇರುವ ಬಸವೇಶ್ವರ ಬಜಾರ್‌ ರಾಜ್ಯ ಹೆದ್ದಾರಿಯಲ್ಲಿಯೇ ಪ್ರತಿ ದಿನ ನೂರಾರು ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ.ಪಟ್ಟಣದಲ್ಲಿ ಸರಕು ಸಾಗಣೆ ವಾಹನಗಳು, ಆಟೊ, ಟ್ಯಾಕ್ಸಿ, ದ್ವಿಚಕ್ರವಾಹನಗಳ ನಿಲುಗಡೆಗೆ ಜಾಗ ಗುರುತಿಸಿಲ್ಲ. ಸಾರಿಗೆ ಸಂಸ್ಥೆಯ ಬಸ್ಸುಗಳು ಕೂಡ ರಸ್ತೆಯಲ್ಲೇ ನಿಲ್ಲುತ್ತದೆ. ಇದು ಸಾರ್ವಜನಿಕರ ಸುಗಮ ಓಡಾಟಕ್ಕೆ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ರಸ್ತೆಯೇ ಪಾರ್ಕಿಂಗ್ ಸ್ಥಳ

ಹೂವಿನಹಡಗಲಿ: ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿಯ ಪಾದಾಚಾರಿ ಮಾರ್ಗಗಳನ್ನು ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿದ್ದಾರೆ. ಇಕ್ಕಟ್ಟಾದ ರಸ್ತೆಯ ಮಧ್ಯೆದಲ್ಲೇ ಅವೈಜ್ಞಾನಿಕವಾಗಿ ಸಾಲು ಬೀದಿದೀಪಗಳನ್ನು ಅಳವಡಿಸಲಾಗಿದೆ. ಹೀಗಾಗಿ ವಾಹನಗಳ ಸಂಚಾರ, ಪಾದಾಚಾರಿಗಳ ಓಡಾಟ, ಪಾರ್ಕಿಂಗ್ ಗೆ ರಸ್ತೆಯೇ ಗತಿಯಾಗಿದೆ.

ಪ್ರಮುಖ ಅಂಗಡಿಗಳೆಲ್ಲ ಮುಖ್ಯ ರಸ್ತೆಯಲ್ಲೇ ಇವೆ. ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀರಾಮ ಸರ್ಕಲ್‌ವರೆಗೆ ಯಾವಾಗಲೂ ಸಂಚಾರ ದಟ್ಟಣೆ ಇರುತ್ತದೆ. ಅಂಗಡಿಗಳ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು ಅರ್ಧ ರಸ್ತೆಯನ್ನು ಆಕ್ರಮಿಸಿದ್ದಾರೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಖರೀದಿಗೆ ಬರುವ ಗ್ರಾಹಕರು ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸುತ್ತಾರೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸವಾರರು, ಪಾದಾಚಾರಿಗಳು ಸಂಚರಿಸಲು ಪರದಾಡುತ್ತಾರೆ.

ಪ್ರಮುಖ ಬ್ಯಾಂಕ್ ಗಳು, ವಾಣಿಜ್ಯ ಮಳಿಗೆಗಳು ಮುಖ್ಯ ರಸ್ತೆ ಹಾಗೂ ಹರಪನಹಳ್ಳಿ ರಸ್ತೆಯಲ್ಲೇ ಇವೆ. ಇಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇರದ ಕಾರಣ ಜನರು ರಸ್ತೆ ಮೇಲೆಯೇ ವಾಹನ ನಿಲ್ಲಿಸುತ್ತಾರೆ. ಬಹುಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣ ನಿರ್ಮಿಸುವಾಗ ಅಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮ ಇದೆ. ಸ್ಥಳೀಯ ಪುರಸಭೆ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ಪರವಾನಗಿ ನೀಡಿರುವುದು ಅವಾಂತರಕ್ಕೆ ಕಾರಣವಾಗಿದೆ.

ಈಚೆಗೆ ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳು ಆಧುನೀಕರಣಗೊಂಡಿವೆ. ಪಟ್ಟಣ ಬೆಳವಣಿಗೆಯ ವೇಗ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಸಂಚಾರ ಸಮಸ್ಯೆ ಮಾತ್ರ 10 ವರ್ಷ ಹಿಂದೆ ಇದ್ದ ಸ್ಥಿತಿಯಲ್ಲೇ ಇದೆ. ರಸ್ತೆ ಮಧ್ಯದಲ್ಲಿರುವ ಬೀದಿದೀಪ ಕಂಬಗಳನ್ನು ಬದಿಗೆ ಸ್ಥಳಾಂತರಿಸಿ, ಪುಟ್ ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಜಾಗದಲ್ಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಸಿ. ಶಿವಾನಂದ, ಕೆ. ಸೋಮಶೇಖರ್, ಎ.ಎಂ. ಸೋಮಶೇಖರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT