ಸೋಮವಾರ, ಡಿಸೆಂಬರ್ 9, 2019
17 °C
ಗೊಂದಲದಲ್ಲಿ ಮುಳುಗಿದ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರು

ಅಭ್ಯರ್ಥಿ ನಿರ್ಧಾರಕ್ಕೆ 13ರ ಮುಹೂರ್ತ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ನ. 13ರ ವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ.

ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲು ಆಯಾ ಪಕ್ಷಗಳು ತೀರ್ಮಾನಿಸಿರುವುದರಿಂದ ಕಾರ್ಯಕರ್ತರು ಗೊಂದಲದಲ್ಲಿ ಮುಳುಗಿದ್ದಾರೆ. ಚುನಾವಣಾ ಪ್ರಕ್ರಿಯೆ ಆರಂಭಗೊಂಡರೂ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದ ಕಾರಣ ಪ್ರಚಾರ ಕೈಗೊಳ್ಳದೇ ಸುಮ್ಮನೆ ಕೂರುವ ಅನಿವಾರ್ಯತೆ ಇದೆ.

ನ. 13ರಂದು ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳಬೇಕಿದೆ. ಹೀಗಾಗಿ ಎರಡೂ ಪಕ್ಷಗಳ ದೃಷ್ಟಿ ನ್ಯಾಯಾಲಯದತ್ತ ನೆಟ್ಟಿದ್ದು, ತೀರ್ಪು ನೋಡಿಕೊಂಡು ಮುಂದುವರೆಯಲು ನಿರ್ಧರಿಸಿವೆ.

ಒಂದುವೇಳೆ ಆನಂದ್‌ ಸಿಂಗ್‌ ವಿರುದ್ಧ ತೀರ್ಪು ಬಂದರೆ ಅವರ ಪತ್ನಿ ಅವರನ್ನು ಕಣಕ್ಕಿಳಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಈಗಾಗಲೇ ನಾಮಪತ್ರ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ ಅವರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈಗಾಗಲೇ ಅನೇಕ ಹಿರಿಯ ಮುಖಂಡರು ಗವಿಯಪ್ಪ ಅವರನ್ನು ಸಂಪರ್ಕಿಸಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪು ಹಾಗೂ ಬಿಜೆಪಿ ನಿರ್ಧಾರ ನೋಡಿಕೊಂಡು ಮುಂದುವರೆಯಲು ಗವಿಯಪ್ಪ ನಿರ್ಧರಿಸಿದ್ದಾರೆ.

ಒಂದುವೇಳೆ ಆನಂದ್‌ ಸಿಂಗ್‌ ಅಥವಾ ಅವರ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಟಿಕೆಟ್‌ ಕೊಟ್ಟರೆ ಗವಿಯಪ್ಪನವರು ಬಿಜೆಪಿ ತೊರೆಯುವುದು ಬಹುತೇಕ ಖಚಿತ ಎಂದು ತಿಳಿದು ಬಂದಿದೆ. ಇದೇ ಮಾತನ್ನೂ ಅವರು ಕಾಂಗ್ರೆಸ್‌ ಮುಖಂಡರಿಗೂ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ವರೆಗೆ ಕಾದು ನೋಡಲು ಕಾಂಗ್ರೆಸ್‌ ನಿರ್ಧರಿಸಿದೆ.

‘ಕಾಂಗ್ರೆಸ್‌ನಲ್ಲಿ ಸ್ಥಳೀಯವಾಗಿ ಹೇಳಿಕೊಳ್ಳುವಂತಹ ಪ್ರಮುಖ ಮುಖಂಡರಿಲ್ಲ. ಅದರಲ್ಲೂ ಆನಂದ್‌ ಸಿಂಗ್‌ ಅವರನ್ನು ಸೋಲಿಸುವ ಸಾಮರ್ಥ್ಯ ಯಾರಿಗೂ ಇಲ್ಲ. ಅವರಿಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಗವಿಯಪ್ಪನವರಿಗೆ ಮಾತ್ರ ಇದೆ. ಅವರಿಗೆ ಬಿಜೆಪಿ ಟಿಕೆಟ್‌ ಸಿಗುವುದು ಅನುಮಾನ. ಹೀಗಾಗಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗವಿಯಪ್ಪನವರು ಕಾಂಗ್ರೆಸ್‌ ಸೇರುವುದರ ಬಗ್ಗೆ ಖಚಿತವಾಗಿ ಇದುವರೆಗೆ ತಿಳಿಸಿಲ್ಲ. ನಮ್ಮ ಪಕ್ಷದ ಮುಖಂಡರಾದ ಕೆ.ಎಸ್‌.ಎಲ್‌. ಸ್ವಾಮಿ, ಪಂಪಾಪತಿ, ವೆಂಕಟರಾವ ಘೋರ್ಪಡೆ, ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರು ಟಿಕೆಟ್‌ನ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಎಲ್ಲವೂ ನ. 13ರ ಬೆಳವಣಿಗೆ ನಂತರವೇ ತೀರ್ಮಾನವಾಗಲಿದೆ’ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

 

ಪ್ರತಿಕ್ರಿಯಿಸಿ (+)