ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ನಗರಸಭೆ| ಐವರಿಗೆ ಸದಸ್ಯತ್ವ ರದ್ದತಿ ತೂಗು ಕತ್ತಿ

ನಗರಸಭೆಯಲ್ಲಿ ಪಕ್ಷಾಂತರ ಪರ್ವ; ಬಿಜೆಪಿ ಸೇರಿದವರಿಗೆ ಕಾರಣ ಕೇಳಿ ನೋಟಿಸ್‌
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ನಗರಸಭೆಗೆ ಚುನಾವಣೆ ನಡೆದು ಐದು ತಿಂಗಳು ಪೂರ್ಣಗೊಂಡಿಲ್ಲ. ಆದರೆ, ಈ ಅವಧಿಯಲ್ಲಿ ಪಕ್ಷಾಂತರ ಪರ್ವ ಮಾತ್ರ ಜೋರಾಗಿ ನಡೆದಿದೆ.

ಒಟ್ಟು 35 ಸದಸ್ಯ ಬಲದ ಹೊಸಪೇಟೆ ನಗರಸಭೆಗೆ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷೇತರರು ತಲಾ 12, ಬಿಜೆಪಿ 10, ಎಎಪಿ 1 ಸ್ಥಾನದಲ್ಲಿ ಜಯ ಗಳಿಸಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ 9 ಜನ ಪಕ್ಷೇತರರು, ಎಎಪಿ ಸದಸ್ಯರು ಬಿಜೆಪಿ ಸೇರಿದ್ದರಿಂದ ಕಮಲ ಪಕ್ಷ ಸುಲಭವಾಗಿ ಅಧಿಕಾರದ ಗದ್ದುಗೆ ಏರಿತ್ತು. ಈಗ ನಡೆದ ಹೊಸ ಬೆಳವಣಿಗೆಯಲ್ಲಿ ಐವರು ಕಾಂಗ್ರೆಸ್‌ ಸದಸ್ಯರು ದಿಢೀರನೆ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಬಿಜೆಪಿಯ ಸಂಖ್ಯಾ ಬಲ 25ಕ್ಕೆ ಏರಿದೆ.

ನಗರದಲ್ಲಿ ಸೋಮವಾರ (ಮೇ 2) ಏರ್ಪಡಿಸಿದ್ದ ಸಮಾರಂಭದಲ್ಲಿ ಐದು ಜನ ಸದಸ್ಯರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. 8ನೇ ವಾರ್ಡಿನ ವಿ. ಹುಲುಗಪ್ಪ, 10ನೇ ವಾರ್ಡಿನ ರೋಹಿಣಿ ವೆಂಕಟೇಶ್‌, 28ನೇ ವಾರ್ಡಿನ ಎಚ್‌.ಕೆ. ಮಂಜುನಾಥ್‌, 33ನೇ ವಾರ್ಡಿನ ಲಕ್ಷ್ಮಿ ಚಂದ್ರಶೇಖರ್‌ ಪರಗಂಟಿ, 35ನೇ ವಾರ್ಡಿನ ರಾಧಾ ಗುಡುಗುಂಟಿ ಮಲ್ಲಿಕಾರ್ಜುನ ಬಿಜೆಪಿ ಸೇರಿದವರು.

ತೂಗು ಕತ್ತಿ:

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸದೇ ಬಿಜೆಪಿ ಸೇರಿರುವ ಐದು ಜನಕ್ಕೂ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರು ಗುರುವಾರ ಕಾರಣ ಕೇಳಿ (ಮೇ 5) ನೋಟಿಸ್‌ ನೀಡಿದ್ದಾರೆ. ಏಳು ದಿನಗಳ ಒಳಗೆ ವಿವರಣೆ ನೀಡಬೇಕೆಂದು ಸೂಚಿಸಿದ್ದಾರೆ.

ಜನವರಿಯಲ್ಲಿ ನಡೆದ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ವಿ. ಕನಕಮ್ಮ ಅವರನ್ನು ಕಣಕ್ಕಿಳಿಸಿತ್ತು. ವಿಪ್‌ ಉಲ್ಲಂಘಿಸಿ ಅವರು ಗೈರಾಗಿದ್ದರು. ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಚುನಾವಣೆಯಿಂದ ದೂರ ಉಳಿದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಅವರಿಗೂ ನೋಟಿಸ್‌ ನೀಡಿತ್ತು. ಅದಾದ ಬೆನ್ನಲ್ಲೇ ಈಗ ಪುನಃ ಐದು ಜನ ಪಕ್ಷದಿಂದ ವಿಮುಖರಾಗಿದ್ದಾರೆ. ತನ್ನ ಪಕ್ಷದ ಸದಸ್ಯರನ್ನು ಅಂಕೆಯಲ್ಲಿ ಇಟ್ಟುಕೊಳ್ಳುವುದೇ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ.

ಈ ವಿಷಯ ಸದ್ಯ ಕೆಪಿಸಿಸಿ ಅಂಗಳ ತಲುಪಿದೆ. ಪಕ್ಷದ ಮುಖಂಡರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಅವರ ಸೂಚನೆಯ ಮೇರೆಗೆ ನೋಟಿಸ್‌ ನೀಡಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಯಾವುದೇ ಪಕ್ಷದ ಸದಸ್ಯರು ಪಕ್ಷಾಂತರ ಮಾಡಬೇಕಾದರೆ ಒಟ್ಟು ಸದಸ್ಯರಲ್ಲಿ 2/3ರಷ್ಟು ಸದಸ್ಯರು ಒಟ್ಟಿಗೆ ಪಕ್ಷಾಂತರ ಮಾಡಿದರೆ ಯಾವುದೇ ತೊಡಕಾಗುವುದಿಲ್ಲ. ಅದನ್ನು ಮೀರಿದರೆ ಸದಸ್ಯತ್ವ ರದ್ದಾಗುವ ಸಾಧ್ಯತೆ ಇರುತ್ತದೆ. ನಗರಸಭೆಯಲ್ಲಿ ಕಾಂಗ್ರೆಸ್ಸಿನ 12 ಜನ ಸದಸ್ಯರಿದ್ದಾರೆ. 8 ಜನ ಒಟ್ಟಿಗೆ ಪಕ್ಷಾಂತರ ಮಾಡಿದರೆ ಕಾನೂನಿನ ತೊಡಕಾಗುತ್ತಿರಲಿಲ್ಲ. ಆದರೆ, ಈಗ 5 ಜನ ಪಕ್ಷಾಂತರ ಮಾಡಿದ್ದಾರೆ. ಇದು ಕಾನೂನಿಗೆ ವಿರುದ್ಧವಾದ ನಡೆ. ಒಂದುವೇಳೆ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದರೆ ಅವರ ಸದಸ್ಯತ್ವಕ್ಕೆ ಕುತ್ತು ಬಂದೊದಗಬಹುದು.

ವಿಳಂಬದ ಲಾಭ:

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದರೂ ಅದನ್ನು ಲೆಕ್ಕಿಸದೇ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿರುವುದೇಕೆ? ಇಂತಹವರಿಗೆ ಕಾನೂನಿನ ಭಯವಿಲ್ಲವೇ? ಹೌದು ಭಯ ಇಲ್ಲ ಎನ್ನಬಹುದು. ಈ ಕಾರಣಕ್ಕಾಗಿಯೇ ಯಾವುದೇ ಅಳುಕಿಲ್ಲದೇ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಅಧಿಕಾರದಲ್ಲಿರುವ ಪಕ್ಷ ಅಧಿಕಾರಿಗಳ ಮೇಲೆ ಒತ್ತಡ ಹೇಳಿ ಇಡೀ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾರೆ. ಒಂದುವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ ಉದ್ದೇಶಪೂರ್ವಕವಾಗಿಯೇ ಅಲ್ಲಿ ವಿಳಂಬವಾಗುವಂತೆ ನೋಡಿಕೊಳ್ಳಲಾಗುತ್ತದೆ. ಪ್ರಕರಣದ ವಿಚಾರಣೆ ಮುಗಿಯುವುದರೊಳಗೆ ಅವಧಿ ಮುಗಿದಿರುತ್ತದೆ. ಇದನ್ನು ಅರಿತುಕೊಂಡೇ ಪಕ್ಷಾಂತರ ಮಾಡಿ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT