ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಪೊಲೀಸರ ಕೆಲಸಕ್ಕೆ ಭಾರಿ ಮೆಚ್ಚುಗೆ

ಎಸ್ಪಿ ಅರುಣ್‌ ವಿಜಯನಗರದ ‘ಸಿಂಗಂ’ ಎಂದು ಜನರಿಂದ ಗುಣಗಾನ
Last Updated 5 ಸೆಪ್ಟೆಂಬರ್ 2022, 15:59 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಗಣೇಶ ಉತ್ಸವವನ್ನು ಶಾಂತಿಯುತ ಹಾಗೂ ಕಾನೂನಿನ ಕಟ್ಟಳೆಯೊಳಗೆ ಎಲ್ಲರೂ ನಡೆದುಕೊಳ್ಳುವಂಥ ರೀತಿಯಲ್ಲಿಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದ್ದ ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಅದರಲ್ಲೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರ ಕಾರ್ಯವೈಖರಿಯನ್ನು ಜನ ಕೊಂಡಾಡುತ್ತಿದ್ದಾರೆ. ಅವರನ್ನು ವಿಜಯನಗರ ಜಿಲ್ಲೆಯ ‘ಸಿಂಗ’ ಎಂದು ಗುಣಗಾನ ಮಾಡುತ್ತಿದ್ದಾರೆ.

ಈ ಹಿಂದೆ ಗಣೇಶ ಉತ್ಸವದಲ್ಲಿ ಐದು ದಿನ ಆಯಾ ಗಣೇಶ ಮಂಡಳಿಯವರು ಮಂಟಪ ನಿರ್ಮಿಸಿ, ಗಣಪನ ಕೂರಿಸಿ ಹಗಲು–ರಾತ್ರಿಯೆನ್ನದೆ ಧ್ವನಿವರ್ಧಕ, ಡಿ.ಜೆ. ಹಾಕುತ್ತಿದ್ದರು. ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲೂ ಇದು ಸಾಮಾನ್ಯವಾಗಿತ್ತು. ಆದರೆ, ಈ ವರ್ಷ ಅದಕ್ಕೆಲ್ಲ ಕಡಿವಾಣ ಹಾಕಿದ್ದರು. ರಾತ್ರಿ ಹತ್ತರಿಂದ ಬೆಳಿಗ್ಗೆ 6ರ ತನಕ ಧ್ವನಿವರ್ಧಕ, ಡಿ.ಜೆ ಬಳಸಲು ಅನುಮತಿ ನೀಡಿರಲಿಲ್ಲ. ಅಷ್ಟೇ ಅಲ್ಲ, ಹಗಲಿನಲ್ಲೂ ಜನರಿಗೆ ಕಿರಿಕಿರಿಯಾಗದ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ರಸ್ತೆ ಮೇಲೆ ಪೆಂಡಾಲ್‌ ಹಾಕಿದವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ತಡರಾತ್ರಿ ಮೂರ್ತಿಗಳ ವಿಸರ್ಜನೆ ಮುಗಿಯುವವರೆಗೆ ಎಸ್ಪಿ ಮೊಕ್ಕಾಂ ಹೂಡಿದ್ದರು. ನಿಯಮ ಮೀರಿದವರ ವಿರುದ್ಧ ಸ್ಥಳದಲ್ಲೇ ಕ್ರಮವೂ ಜರುಗಿಸಿದ್ದರು. ಇದು ಈಗ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

‘ನಮ್ಮ ಮನೆಯಲ್ಲಿ ನಮ್ಮ ಮಾವ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಹೆಚ್ಚಿನ ಶಬ್ದ ಆಗುವುದಿಲ್ಲ. ಈ ಹಿಂದಿನ ವರ್ಷಗಳಂತೆ ಈ ವರ್ಷವೂ ಧ್ವನಿವರ್ಧಕ, ಡಿ.ಜೆ ಅಳವಡಿಸಿ ರಾತ್ರಿಯಿಡೀ ಹಾಡು ಹಾಕುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅದ್ಯಾವುದೂ ನಡೆಯಲಿಲ್ಲ. ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಎಸ್ಪಿಯವರು ಥೇಟ್‌ ‘ಸಿಂಗ’ ರೀತಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಇದೇ ರೀತಿ ಮಾಡಬೇಕು. ಯಾವುದೇ ಸಂಭ್ರಮ ಮತ್ತೊಬ್ಬರಿಗೆ ಕಿರಿಕಿರಿ ಉಂಟು ಮಾಡಬಾರದು’ ಎಂದು ಸ್ಥಳೀಯ ನಿವಾಸಿ ಸೌಜನ್ಯ ಹೇಳಿದರು.

‘ಡಿ.ಜೆ ಹಾಕುವುದರಿಂದ ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಹೃದಯ ಸೇರಿದಂತೆ ಇತರೆ ಕಾಯಿಲೆ ಇರುವವರಿಗೆ ತೀವ್ರ ಸಮಸ್ಯೆ ಆಗುತ್ತದೆ. ಅವರ ಪ್ರಾಣಕ್ಕೂ ಕುತ್ತು ಬರಬಹುದು. ಈ ಹಿಂದೆ ಎಷ್ಟೇ ಮನವಿ ಮಾಡಿದರೂ ಬೇಕಾಬಿಟ್ಟಿ ಡಿ.ಜೆ. ಹಾಕುತ್ತಿದ್ದರು. ಈ ವರ್ಷ ಪೊಲೀಸರು ಅದನ್ನು ತಡೆದು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಪ್ರಭು ತಿಳಿಸಿದರು.

‘ಯಾರ ಪ್ರಭಾವಕ್ಕೂ ಒಳಗಾಗದೆ ಎಸ್ಪಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಸೋಮಶೇಖರ್‌ ಬಣ್ಣದಮನೆ ಹೇಳಿದರು.

ನಿಯಮ ಉಲ್ಲಂಘನೆ; 17 ಪ್ರಕರಣ ದಾಖಲು
‘ಜಿಲ್ಲೆಯಲ್ಲಿ ಐದು ದಿನಗಳ ಗಣೇಶ ಉತ್ಸವದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಒಟ್ಟು 17 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಸೋಮವಾರ ತಿಳಿಸಿದ್ದಾರೆ.

ಗಣೇಶನ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ತಡರಾತ್ರಿ ಡಿ.ಜೆ ಬಳಸಿದಕ್ಕಾಗಿ 10, ರಸ್ತೆಯಲ್ಲಿ ಪೆಂಡಾಲ್‌ ಹಾಕಿದ್ದಕ್ಕೆ 5 ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿಯಲ್ಲಿ ತಲಾ ಒಂದು ಪ್ರಕರಣ ಡಿ.ಜೆ.ಗೆ ಸಂಬಂಧಿಸಿದೆ. ಸಿ.ಸಿ.ಟಿ.ವಿ. ಕ್ಯಾಮೆರಾಗಳ ಪರಿಶೀಲನೆ ಮುಂದುವರೆದಿದ್ದು, ನಿಯಮ ಮೀರಿದ್ದು ಕಂಡು ಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಡಿ.ಜೆ ಸೀಜ್; ದಿಢೀರ್ ಪ್ರತಿಭಟನೆ
ನಗರದಲ್ಲಿ ಭಾನುವಾರ ತಡರಾತ್ರಿ ಗಣೇಶನ ಮೂರ್ತಿ ವಿಸರ್ಜನೆ ವೇಳೆ ನಿಯಮ ಮೀರಿ ಬಳಸಿದ ಡಿ.ಜೆ.ಯನ್ನು ಪೊಲೀಸರು ಸೀಜ್ ಮಾಡಿದ್ದನ್ನು ವಿರೋಧಿಸಿ ಕೆಲಕಾಲ ಚಿತ್ರಕೇರಿ ಗಣೇಶ ಮಂಡಳಿಯವರು ಪುಣ್ಯಮೂರ್ತಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

ಡಿ.ಜೆ ಬಂದ್ ಮಾಡಿ ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ಗಣಪನ ಮೂರ್ತಿ ಸಮೇತ ಪಟ್ಟಣ ಠಾಣೆಗೆ ಹೋಗಲು ಮುಂದಾದರು. ಅವರನ್ನು ಪೊಲೀಸರು ಪುಣ್ಯಮೂರ್ತಿ ವೃತ್ತದಲ್ಲಿ ತಡೆದರು. ಡಿ.ಜೆ ಬಿಡಬೇಕೆಂದು ಆಗ್ರಹಿಸಿದರು. ಬಳಿಕ ಪೊಲೀಸರ ಮನವೊಲಿಕೆ ನಂತರ ಪ್ರತಿಭಟನೆ ಕೈಬಿಟ್ಟು ಗಣೇಶನ ಮೂರ್ತಿ ವಿಸರ್ಜನೆಗೆ ಕೊಂಡೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT