ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದರು

ಹಂಪಿಯಲ್ಲಿ ಸ್ಥಳೀಯರೊಂದಿಗೆ ರಂಗಿನಾಟವಾಡಿದ ವಿದೇಶಿಯರು
Last Updated 21 ಮಾರ್ಚ್ 2019, 10:53 IST
ಅಕ್ಷರ ಗಾತ್ರ

ಹೊಸಪೇಟೆ: ಹೋಳಿ ಹಬ್ಬದ ಪ್ರಯುಕ್ತ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಜನ ಗುರುವಾರ ರಂಗಿನಾಟವಾಡಿ ಸಂಭ್ರಮಿಸಿದರು.

ಆಗಷ್ಟೇ ಸೂರ್ಯನ ಬೆಳಕು ಹರಿಯುತ್ತಿತ್ತು. ಅಷ್ಟೊತ್ತಿಗಾಗಲೇ ಜನರ ಮುಖ, ಅವರು ತೊಟ್ಟಿದ್ದ ಬಟ್ಟೆಗಳು ಬಗೆಬಗೆಯ ಬಣ್ಣದಲ್ಲಿ ಮಿಂದೆದ್ದವು. ಪರಸ್ಪರ ಬಣ್ಣ ಹಾಕಿಕೊಂಡು ‘ಹ್ಯಾಪಿ ಹೋಳಿ’ ಎಂದು ಶುಭಾಷಯ ವಿನಿಮಯ ಮಾಡಿಕೊಂಡರು.

ಯುವತಿಯರು, ಮಹಿಳೆಯರು ನೆರೆಮನೆಯವರೊಂದಿಗೆ ಬಣ್ಣದಾಟವಾಡಿ ಸಂಭ್ರಮಿಸಿದರೆ, ಚಿಣ್ಣರು ಮನೆಯ ಆವರಣದಲ್ಲಿ ಬಣ್ಣ ಸುರಿದುಕೊಂಡು ಖುಷಿಪಟ್ಟರು. ದಾರಿಹೋಕರ ಮೇಲೆ ಬಣ್ಣ ಎರಚಿ ಸಂತಸಪಟ್ಟರು. ಇನ್ನು ಯುವಕರು ಸ್ನೇಹಿತರ ಗುಂಪು ಕಟ್ಟಿಕೊಂಡು ನಗರದಲ್ಲೆಡೆ ಸುತ್ತಾಡಿ, ಎಲ್ಲರ ಮೇಲೆ ಬಣ್ಣ ಹಾಕುತ್ತಿರುವುದು ಕಂಡು ಬಂತು.

ಕೆಲವರು ಕೇಕೆ, ಶಿಳ್ಳೆ ಹೊಡೆಯುತ್ತ, ಕುಣಿಯುತ್ತ ಬಣ್ಣ ಎರಚುತ್ತ ಹೋದರೆ, ಮತ್ತೆ ಕೆಲವರು ಬಾಜಾ ಭಜಂತ್ರಿಯೊಂದಿಗೆ ನಗರದಾದ್ಯಂತ ಸುತ್ತಾಡಿದರು. ಕೆಲವರು ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ವಿವಿಧ ಬಡಾವಣೆಗಳಿಗೆ ತೆರಳಿ, ಗೆಳೆಯರೊಂದಿಗೆ ಬಣ್ಣದಾಟವಾಡಿದರು.

ನಗರದ ಏಳು ಕೇರಿ, ವಾಲ್ಮೀಕಿ ವೃತ್ತ, ರಾಮಾ ಟಾಕೀಸ್‌, ಮೇನ್‌ ಬಜಾರ್‌, ಪಟೇಲ್‌ ನಗರ, ಆಕಾಶವಾಣಿ ಪ್ರದೇಶ, ಬಸವೇಶ್ವರ ಬಡಾವಣೆ, ಅಮರಾವತಿ, ಚಿತ್ತವಾಡ್ಗಿ ಸೇರಿದಂತೆ ಹಲವು ಕಡೆಗಳಲ್ಲಿ ಜನ ರಂಗಿನಾಟದಲ್ಲಿ ಮುಳುಗಿದ ದೃಶ್ಯ ಕಂಡು ಬಂತು.

ಇನ್ನು ವಿಶ್ವಪ್ರಸಿದ್ಧ ಹಂಪಿಯಲ್ಲಿ ವಿದೇಶಿಯರು ಸ್ಥಳೀಯರೊಂದಿಗೆ ಬೆರೆತು ಹಬ್ಬ ಆಚರಿಸಿದರು. ಸ್ಥಳೀಯರ ಮೇಲೆ ಬಣ್ಣ ಹಾಕಿ, ಅವರೊಂದಿಗೆ ಮೈಮರೆತು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯಿಂದ ತುಂಗಭದ್ರಾ ನದಿ ವರೆಗೆ ಕುಣಿದು ಕುಪ್ಪಳಿಸುತ್ತ ಹೆಜ್ಜೆ ಹಾಕಿದರು. ಇದರಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳೀಯರು ಮನೆಯ ಮಹಡಿಗಳ ಮೇಲೆ ನಿಂತು, ವಿದೇಶಿಯರ ಮೇಲೆ ಬಣ್ಣ ಸುರಿದು ಖುಷಿಪಟ್ಟರು.

ಕೆಲ ವಿದೇಶಿಯರು ಸ್ಥಳೀಯರ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿದದ್ದು ಗಮನ ಸೆಳೆಯಿತು. ಬೆಳಿಗ್ಗೆ ಆರಂಭವಾದ ಬಣ್ಣದಾಟ ಮಧ್ಯಾಹ್ನದ ವರೆಗೆ ನಡೆಯಿತು. ಬಳಿಕ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗಿದರು.

ಚುನಾವಣೆ ನೀತಿ ಸಂಹಿತೆಯಿಂದ ಈ ಸಲ ರಾಜಕೀಯ ಪಕ್ಷಗಳ ಮುಖಂಡರು ಸಾಮೂಹಿಕ ಹೋಳಿ ಹಬ್ಬ ಆಚರಣೆಗೆ ವ್ಯವಸ್ಥೆ ಮಾಡಿರಲಿಲ್ಲ. ಪ್ರತಿ ವರ್ಷ ಶಾಸಕ ಆನಂದ್‌ ಸಿಂಗ್‌, ಮುನ್ಸಿಪಲ್‌ ಮೈದಾನದಲ್ಲಿ ಹಾಗೂ ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪನವರು ಸಾಯಿಬಾಬಾ ವೃತ್ತದ ಬಳಿ ಬಣ್ಣದಾಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT