ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸಂಭ್ರಮದಲ್ಲಿ ಮುಳುಗಿದ ಜನ

ಹೂ, ಹಣ್ಣು, ಗಣಪನ ಪ್ರತಿಮೆ ಮಾರಾಟ ಜೋರು; ಸಂಭ್ರಮ ಮರೆಸಿದ ಬೆಲೆ ಏರಿಕೆ
Last Updated 1 ಸೆಪ್ಟೆಂಬರ್ 2019, 16:18 IST
ಅಕ್ಷರ ಗಾತ್ರ

ಹೊಸಪೇಟೆ: ಗಣೇಶ ಚತುರ್ಥಿಯ ಸಂಭ್ರಮವೂ ಬೆಲೆ ಏರಿಕೆ ಜನರ ಲೆಕ್ಕಕ್ಕೆ ಬಂದಿಲ್ಲ. ಭಾನುವಾರ ನಗರದ ಮಾರುಕಟ್ಟೆಯಲ್ಲಿ ಜನ ಸಡಗರದಿಂದ ಖರೀದಿಯಲ್ಲಿ ತೊಡಗಿರುವುದೇ ಅದಕ್ಕೆ ಸಾಕ್ಷಿ.

ನಗರದ ಮಹಾತ್ಮ ಗಾಂಧಿ ವೃತ್ತ, ಮೇನ್‌ ಬಜಾರ್‌, ಸೋಗಿ ಮಾರುಕಟ್ಟೆ, ರಾಮ ಟಾಕೀಸ್‌, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಭಾನುವಾರ ದಿನವಿಡೀ ಜನದಟ್ಟಣೆ ಕಂಡು ಬಂತು. ವಿವಿಧ ಬಡಾವಣೆಗಳ ಜನ ಮಾರುಕಟ್ಟೆಗೆ ಬಂದು ಹೂ, ಹಣ್ಣು, ತೆಂಗಿನ ಕಾಯಿ, ಕರ್ಪೂರ, ತರಕಾರಿ, ಬಾಳೆದಿಂಡು, ಮಾವಿನ ಎಲೆ ಖರೀದಿಸಿದರು. ರಸ್ತೆ ಬದಿ ಇರಿಸಿದ್ದ ಚಿಕ್ಕ ಗಣಪನ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ದರು.

ಇನ್ನೊಂದೆಡೆ ಕಾಲೇಜು ರಸ್ತೆ, ಕೌಲ್‌ಪೇಟೆ, ರಾಣಿಪೇಟೆಯಲ್ಲಿ ಅಲಂಕಾರಿಕ ವಸ್ತುಗಳ ಖರೀದಿ, ಹೊಸ ಬಟ್ಟೆಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಆದರೆ, ಎಲ್ಲೂ ಚೌಕಾಸಿಗೆ ಅವಕಾಶವೇ ಇರಲಿಲ್ಲ. ಹಬ್ಬಕ್ಕೆ ಒಂದೇ ದಿನ ಬಾಕಿ ಉಳಿದಿರುವುದರಿಂದ ಜನ ಪೂಜೆಗೆ ಅಗತ್ಯ ವಸ್ತುಗಳನ್ನು ಖರೀದಿಸುವುದು ಖಚಿತ ಎಂಬುದನ್ನು ಅರಿತು ವ್ಯಾಪಾರಿಗಳು ಯಾವುದರ ಬೆಲೆಯೂ ಇಳಿಸಲಿಲ್ಲ. ಅವರು ಹೇಳಿದ ಬೆಲೆಗೆ ವಸ್ತುಗಳನ್ನು ಜನ ಅನಿವಾರ್ಯವಾಗಿ ಖರೀದಿಸಿದರು. ಜತೆಗೆ ಹಬ್ಬದ ಸಂಭ್ರಮ ಕಡಿಮೆಯಾಗಬಾರದು ಎಂಬ ಮನಃಸ್ಥಿತಿಯಲ್ಲಿಯೇ ಅವರು ಮಾರುಕಟ್ಟೆಗೆ ಬಂದದ್ದರಿಂದ ಬೆಲೆ ಹೆಚ್ಚಾದರೂ ಅದನ್ನು ಲೆಕ್ಕಿಸದೆಯೇ ವಸ್ತುಗಳನ್ನು ಕೊಂಡುಕೊಂಡರು.

ಎರಡು ವಾರಗಳಿಂದ ಸೇಬಿನ ಬೆಲೆ ₹80ರಿಂದ ₹100 ಇತ್ತು. ಈಗ ಅದು ₹120ರಿಂದ ₹140ಕ್ಕೆ ಏರಿಕೆಯಾಗಿದೆ. ಕಿತ್ತಳೆ ₹100ರಿಂದ ₹120, ದಾಳಿಂಬೆ ₹120ರಿಂದ ₹130, ದ್ರಾಕ್ಷಿ ₹80ರಿಂದ ₹90, ಪೇರಲ ₹60ರಿಂದ ₹70, ಸೀತಾಫಲ ₹60ರಿಂದ ₹70, ಏಲಕ್ಕಿ ಬಾಳೆಹಣ್ಣು ₹60ರಿಂದ ₹80 ಕೆ.ಜಿ., ಮಧ್ಯಮ ಗಾತ್ರದ ತೆಂಗಿನಕಾಯಿ ₹20 ಬೆಲೆಗೆ ಮಾರಾಟ ಮಾಡಿದರು.

ಚೆಂಡು ಹೂ, ಸೇವಂತಿ, ಗುಲಾಬಿ, ಮಲ್ಲಿಗೆ ಸೇರಿದಂತೆ ಎಲ್ಲ ಬಗೆಯ ಹೂಗಳ ಬೆಲೆ ಎಂದಿಗಿಂತ ₹20ರಿಂದ ₹30 ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು. ಪ್ರತಿ ಕೆ.ಜಿ. ಸೇವಂತಿ ಹೂ ₹250ರಿಂದ ₹260, ಗುಲಾಬಿ ₹220ರಿಂದ ₹230, ಚೆಂಡು ಹೂ ₹130ರಿಂದ ₹150 ಇತ್ತು.

‘ತರಕಾರಿ, ಹಣ್ಣು, ಹೂ ಎಲ್ಲದರ ಬೆಲೆ ಹೆಚ್ಚಾಗಿದೆ. ಆದರೆ, ಹಬ್ಬ ಅರ್ಧಂಬರ್ಧ ಮಾಡಲು ಆಗುವುದಿಲ್ಲ. ವರ್ಷಕ್ಕೊಮ್ಮೆ ಹಬ್ಬ ಬರುತ್ತದೆ. ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ವ್ಯಾಪಾರಿಗಳು ಚೆನ್ನಾಗಿ ಗೊತ್ತು ಇದೇ ಸಮಯ ಎಂದು. ಹೀಗಾಗಿ ಸಹಜವಾಗಿಯೇ ಬೆಲೆ ಏರಿಸುತ್ತಾರೆ’ ಎಂದು ಮಹಾತ್ಮ ಗಾಂಧಿ ವೃತ್ತದಲ್ಲಿ ಪೂಜೆಯ ವಸ್ತು ಖರೀದಿಸಲು ಬಂದಿದ್ದ ಬಸವೇಶ್ವರ ಬಡಾವಣೆಯ ಶೋಭಾ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ನಗರದ ವಿವಿಧ ಬಡಾವಣೆಯ ಗಣೇಶ ಮಂಡಳಿಯವರು ಭಾನುವಾರ ಗಣಪನ ಮೂರ್ತಿಗಳನ್ನು ತೆಗೆದುಕೊಂಡು ಹೋದರು. ಮುಂಚಿತವಾಗಿಯೇ ಹಣ ಕೊಟ್ಟು ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದ ಅವರು, ಭಾನುವಾರ ಅವರ ಮಂಡಳಿಯ ಸದಸ್ಯರೊಂದಿಗೆ ಬಂದು, ಮೂರ್ತಿ ಕೊಂಡೊಯ್ದರು. ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ದಿನವಿಡೀ ಗಣಪನ ಮೂರ್ತಿಗಳ ದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT