ಹೊಸಪೇಟೆ ತಾಲ್ಲೂಕಿನ ಹಳೆ ಮಲಪನಗುಡಿ: ಕಲ್ಲೆಸೆತ್ತಕ್ಕೆ ಅಲೆಮಾರಿಗಳು ಕಂಗಾಲು

7

ಹೊಸಪೇಟೆ ತಾಲ್ಲೂಕಿನ ಹಳೆ ಮಲಪನಗುಡಿ: ಕಲ್ಲೆಸೆತ್ತಕ್ಕೆ ಅಲೆಮಾರಿಗಳು ಕಂಗಾಲು

Published:
Updated:
Deccan Herald

ಹೊಸಪೇಟೆ: ತಾಲ್ಲೂಕಿನ ಹಳೆ ಮಲಪನಗುಡಿಯ ಕಲ್ಲುಗಡ್ಡದಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯದವರ ಟೆಂಟ್‌ಗಳ ಮೇಲೆ ಕೆಲವು ದಿನಗಳಿಂದ ಕಿಡಿಗೇಡಿಗಳು ಕಲ್ಲು ಎಸೆಯುತ್ತಿದ್ದು, ಅವರು ಭಯದ ನೆರಳಿನಲ್ಲಿ ಬದುಕುವಂತಾಗಿದೆ.

‘ರಾತ್ರಿ 9 ಗಂಟೆಯ ನಂತರ ಕಲ್ಲುಗಳು ತೂರಿ ಬರುತ್ತಿವೆ. ಯಾರು ಎಸೆಯುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಕಲ್ಲೆಸೆತದಿಂದ ಕೆಲವರು ಗಾಯಗೊಂಡಿದ್ದಾರೆ. ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ’ ಎಂದು ನಾಗರಾಜ, ದುರ್ಗಮ್ಮ, ಕುಮಾರ ತಿಳಿಸಿದರು.

‘ಚಿಂದಿ ಆರಿಸುವುದು, ಕೂಲಿ, ಮೀನುಗಾರಿಕೆ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಆದರೆ, ನಾಲ್ಕೈದು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಒಂದೇ ಸಮನಾಗಿ ಕಲ್ಲು ತೂರಲಾಗುತ್ತಿದೆ. ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗುತ್ತಿರಬಹುದು. ಆದರೆ, ಯಾಕೆ ಈ ರೀತಿ ಮಾಡುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ’ ಎಂದು ದುರ್ಗಮ್ಮ ಹೇಳಿದರು.

‘ಸುಮಾರು 20 ಟೆಂಟ್‌ಗಳಲ್ಲಿ 50ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಕಲ್ಲು ಎಸೆಯುತ್ತಿರುವುದರಿಂದ ಅಲೆಮಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಈ ಕೃತ್ಯ ಎಸಗುತ್ತಿರುವವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲಿ ನೆಲೆಸಿರುವ ಎಲ್ಲರಿಗೂ ಭದ್ರತೆ ಒದಗಿಸಬೇಕು’ ಎಂದು ಗುಡಾರ ಗುಡಿಸಲು ನಿವಾಸಿಗಳ ಸಂಘದ ಜಿಲ್ಲಾ ಅಧ್ಯಕ್ಷ ಸಣ್ಣ ಮಾರೆಪ್ಪ ಆಗ್ರಹಿಸಿದ್ದಾರೆ.

‘ಸ್ಥಳೀಯರಿಂದ ಈ ವಿಷಯ ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುವುದು’ ಎಂದು ಡಿವೈಎಸ್‌ಪಿ ಕೆ. ಶಿವಾರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !