ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ| ಜನರನ್ನು ತಲ್ಲಣಗೊಳಿಸಿರುವ ವೈರಾಣು ಜ್ವರ

ಬದಲಾದ ಹವಾಮಾನದಿಂದ ವ್ಯಾಪಕವಾಗಿ ಹರಡುತ್ತಿರುವ ರೋಗ
Last Updated 29 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ವೈರಾಣು ಜ್ವರ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಇದು ಜನರನ್ನು ತಲ್ಲಣಗೊಳಿಸಿದೆ.

ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರನ್ನೂ ಜ್ವರ ಕಾಡುತ್ತಿದೆ. ಮನೆಯ ಒಬ್ಬ ಸದಸ್ಯರಿಗೆ ಬಂದರೆ ಬಹುಬೇಗ ಮಿಕ್ಕುಳಿದವರೆಲ್ಲರಿಗೂ ಬರುತ್ತಿದೆ. ನಿತ್ಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ನಗರದ ಉಪವಿಭಾಗ ಮಟ್ಟದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ನಿತ್ಯ ಸರಿಸುಮಾರು 800ಕ್ಕೂ ಅಧಿಕ ಜನ ಜ್ವರ ಸಂಬಂಧಿ ಚಿಕಿತ್ಸೆಗೆ ಬರುತ್ತಿದ್ದಾರೆ. ತಾಲ್ಲೂಕು ಸೇರಿದಂತೆ ನೆರೆಯ ತಾಲ್ಲೂಕುಗಳಾದ ಕಂಪ್ಲಿ, ಸಂಡೂರು, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿಯಿಂದಲೂ ಅಧಿಕ ಸಂಖ್ಯೆಯಲ್ಲಿ ಜನ ಚಿಕಿತ್ಸೆಗೆ ಧಾವಿಸುತ್ತಿದ್ದಾರೆ.

ಇನ್ನೂ ನಗರದ ಖಾಸಗಿ ಆಸ್ಪತ್ರೆಗಳಲ್ಲೂ ನಿತ್ಯ ಭಾರಿ ಜನದಟ್ಟಣೆ ಕಂಡು ಬರುತ್ತಿದೆ. ಜನ ತಡಹೊತ್ತು ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡುವ ಪ್ರಯೋಗಾಲಯಗಳಿಗೂ ಇದೇ ವೇಳೆ ಭಾರಿ ಬೇಡಿಕೆ ಬಂದಿದೆ.

‘ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಆಗಿರುವುದರಿಂದ ವೈರಾಣು ಜ್ವರ ಹೆಚ್ಚಾಗಲು ಪ್ರಮುಖ ಕಾರಣ’ ಎನ್ನುತ್ತಾರೆ ಇಲ್ಲಿನ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ, ಹಿರಿಯ ವೈದ್ಯ ಡಾ. ಸಲೀಂ.

‘ದಿನವಿಡೀ ವಿಪರೀತ ಬಿಸಿಲು ಇರುತ್ತಿದೆ. ಅದರ ಮಧ್ಯೆ ಆಗೊಮ್ಮೆ ಈಗೊಮ್ಮೆ ಮಳೆ ಬೀಳುತ್ತಿದೆ. ನಿತ್ಯ ರಾತ್ರಿ ಹೊತ್ತು ಮಳೆ ಸುರಿಯುತ್ತಿದೆ. ವಾತಾವರಣ ಹೀಗಿರುವಾಗ ವೈರಾಣು ಜ್ವರ ಹರಡುವುದು ಸಾಮಾನ್ಯ. ಗಾಳಿ ಮೂಲಕವೇ ಇದು ಹರಡುತ್ತಿದೆ ಹೊರತು ಸೊಳ್ಳೆ ಮೊತ್ತೊಂದರಿಂದ ಅಲ್ಲ’ ಎಂದು ತಿಳಿಸಿದರು.

‘ವೈರಾಣು ಜ್ವರ ಬಂದವರಲ್ಲಿ ವಿಪರೀತ ತಲೆನೋವು, ಶೀತ, ನೆಗಡಿ, ನಿತ್ರಾಣ ಆಗುತ್ತದೆ. ಒಮ್ಮೆ ಜ್ವರ ಬಂದರೆ ಎರಡು ವಾರಗಳವರೆಗೆ ಇರುತ್ತದೆ. ನಂತರವೂ ಜ್ವರ ಹಾಗೆಯೇ ಇದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ವೈರಾಣು ಜ್ವರ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ಪಡೆದುಕೊಂಡು, ಕೆಲದಿನಗಳ ವರೆಗೆ ವಿಶ್ರಾಂತಿ ತೆಗೆದುಕೊಂಡರೆ ಆರೋಗ್ಯವಂತರಾಗಬಹುದು. ಈ ಜ್ವರಕ್ಕೆ ಎಲ್ಲ ರೀತಿಯ ಔಷಧೋಪಚಾರ ಸರ್ಕಾರ ಆಸ್ಪತ್ರೆಯಲ್ಲಿದೆ. ದಿನದ 24 ಗಂಟೆ ವೈದ್ಯರು ಲಭ್ಯರಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪದೇ ಪದೇ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ನೀರು ನಿಲ್ಲದಂತೆ ನಗರಸಭೆ ಕ್ರಮ ಕೈಗೊಳ್ಳಬೇಕು. ಅಪೂರ್ಣ ಒಳಚರಂಡಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಇಲ್ಲವಾದರೆ ದುರ್ಗಂಧ, ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು. ಎಲ್ಲ ವಾರ್ಡುಗಳಲ್ಲಿ ನಿತ್ಯ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ತಪ್ಪದೇ ಫಾಗಿಂಗ್‌ ಮಾಡಿದರೆ ಡೆಂಗಿ, ಮಲೇರಿಯಾದಂತಹ ರೋಗಗಳು ಹರಡದಂತೆ ತಡೆಯಬಹುದು’ ಎಂದು ಪರಿಸರ ಪ್ರೇಮಿ ರಾಹುಲ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT