ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಬಿಡಾಡಿ ದನಗಳಿಂದ ಮುಕ್ತಿ ಯಾವಾಗ?

ರಸ್ತೆಯಲ್ಲಿ ಬಿದ್ದಿರುವ ಗುಂಡಿ, ಗುಂಪಾಗಿ ಕೂರುವ ದನಗಳ ಮಧ್ಯೆ ಓಡಾಡುವ ಅನಿವಾರ್ಯತೆ
Last Updated 3 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ‘ನಗರದಲ್ಲಿ ಈ ಬಿಡಾಡಿ ದನಗಳಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತದೆಯೋ?’

ಇಂತಹದ್ದೊಂದು ಪ್ರಶ್ನೆ ನಗರದ ಜನತೆ ಈಗ ನಿತ್ಯ ಅವರೇ ಹಾಕಿಕೊಳ್ಳುತ್ತಿದ್ದಾರೆ. ಎಷ್ಟರಮಟ್ಟಿಗೆ ಅವರು ಅವುಗಳಿಂದ ಬೇಸತ್ತು ಹೋಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ.

ನಗರದಲ್ಲಿ ಇಂತಹುದೇ ನಿರ್ದಿಷ್ಟ ರಸ್ತೆಯಂತಲ್ಲ. ಯಾವುದೇ ರಸ್ತೆಗೆ ಹೋದರೂ ಅಲ್ಲಿ ಬಿಡಾಡಿ ರಸ್ತೆಗಳು ಗುಂಪು ಗುಂಪಾಗಿ ಓಡಾಡುತ್ತಿರುವುದು, ರಸ್ತೆಯ ಮಧ್ಯೆಯೇ ಠಿಕಾಣಿ ಹೂಡಿರುವುದು ಕಂಡು ಬರುತ್ತದೆ. ಅವುಗಳ ಜವಾಬ್ದಾರಿ ಯಾರು ಹೊರುವವರು ಇಲ್ಲದ ಕಾರಣ ಅವುಗಳನ್ನು ರಸ್ತೆ ಮೇಲಿಂದ ಓಡಿಸಲು ಪ್ರಯತ್ನಿಸುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಒಂದು ಕಡೆ ಗುಂಡಿಗಳನ್ನು ತಪ್ಪಿಸಿ ವಾಹನ ಓಡಿಸಬೇಕು. ಇನ್ನೊಂದೆಡೆ ಬೇಕಾಬಿಟ್ಟಿ ರಸ್ತೆಯಲ್ಲಿ ಓಡಾಡುವ ದನಗಳಿಂದ ಬಚಾವ್‌ ಆಗಿ ಮುಂದೆ ಸಾಗಬೇಕಾದ ಸವಾಲು ಇದೆ. ಸ್ವಲ್ಪ ಯಾಮರಿದರೂ ಅಪಘಾತ ಕಟ್ಟಿಟ್ಟ ಬುತ್ತಿ.

‘ಮಾಲೀಕರು ಬಿಡಾಡಿ ದನಗಳನ್ನು ರಸ್ತೆಗೆ ಬಿಡಬಾರದು. ನಿರ್ಜನ ಪ್ರದೇಶ ಅಥವಾ ಅವರಿಗೆ ಸೇರಿದ ಜಾಗದಲ್ಲಿ ಇರಿಸಬೇಕು. ಒಂದುವೇಳೆ ರಸ್ತೆ ಮೇಲೆ ದನಗಳನ್ನು ಬಿಟ್ಟರೆ ಅವುಗಳನ್ನು ವಶಕ್ಕೆ ತೆಗೆದುಕೊಂಡು ದಂಡ ಹೇರಲಾಗುವುದು’ ಎಂದು ನಗರಸಭೆ ಎಚ್ಚರಿಕೆ ನೀಡಿ ತಿಂಗಳುಗಳೇ ಕಳೆದಿವೆ. ಆರಂಭದಲ್ಲಿ ಕೆಲ ಮಾಲೀಕರ ವಿರುದ್ಧ ನಗರಸಭೆ ಕ್ರಮ ಕೂಡ ಜರುಗಿಸಿತ್ತು. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಈಗಲೂ ರಾಜಾರೋಷವಾಗಿ ಬಿಡಾಡಿ ದನಗಳನ್ನು ಅವುಗಳ ಮಾಲೀಕರು ರಸ್ತೆಗೆ ಬಿಡುತ್ತಿದ್ದಾರೆ.

ನಗರದ ಮೇನ್‌ ಬಜಾರ್‌, ಕಾಲೇಜು ರಸ್ತೆ, ಟಿ.ಬಿ.ಡ್ಯಾಂ ರಸ್ತೆ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತ, ಹಂಪಿ ರಸ್ತೆ, ಸಾಯಿಬಾಬಾ ವೃತ್ತ, ಎ.ಪಿ.ಎಂ.ಸಿ. ಮಾರುಕಟ್ಟೆ ವೃತ್ತ, ಸ್ಟೇಶನ್‌ಗೆ ಹೋಗುವ ಮುಖ್ಯರಸ್ತೆಗಳು ಬಿಡಾಡಿ ದನಗಳ ಅಡ್ಡೆಯಾಗಿದೆ. ಇನ್ನೂ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಂತೂ ಅವುಗಳ ಓಡಾಟ ಸಾಮಾನ್ಯವಾಗಿದೆ.

ರಸ್ತೆಗೆ ಅಡ್ಡಗಟ್ಟಿ ನಿಲ್ಲುವ ದನಗಳನ್ನು ಯಾರಾದರೂ ಬೆದರಿಸಲು ಹೋದರೆ ಮೈಮೇಲೆ ಎರಗಿ ಬರುತ್ತವೆ. ಎಷ್ಟೋ ಜನ ಹೀಗೆ ಮಾಡಲು ಹೋಗಿ ಗಾಯ ಮಾಡಿಕೊಂಡಿರುವ ನಿದರ್ಶನಗಳಿವೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಆತಂಕದಲ್ಲಿ ಓಡಾಡುತ್ತಿದ್ದಾರೆ. ಏನೂ ಮಾಡದೆ ಅಸಹಾಯಕರಾಗಿ ನಗರಸಭೆಯನ್ನು ಶಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT