ಅವೈಜ್ಞಾನಿಕ ಕಾಮಗಾರಿಗಳಿಂದ ಹೊಸಪೇಟೆ ನಗರದಲ್ಲಿ ಜನರ ನೆಮ್ಮದಿ ಕೆಡಿಸಿರುವ ದೂಳು

7

ಅವೈಜ್ಞಾನಿಕ ಕಾಮಗಾರಿಗಳಿಂದ ಹೊಸಪೇಟೆ ನಗರದಲ್ಲಿ ಜನರ ನೆಮ್ಮದಿ ಕೆಡಿಸಿರುವ ದೂಳು

Published:
Updated:
Deccan Herald

ಹೊಸಪೇಟೆ: ನಗರದಲ್ಲಿ ದೂಳಿನಿಂದ ಜನ ಕಂಗೆಟ್ಟು ಹೋಗಿದ್ದಾರೆ.

ನಗರದ ಯಾವ ಭಾಗಕ್ಕೆ ಹೋದರೂ ದೂಳಿನ ಸ್ನಾನವಾಗುತ್ತದೆ. ಅಷ್ಟರಮಟ್ಟಿಗೆ ಇಡೀ ನಗರಕ್ಕೆ ದೂಳು ಆವರಿಸಿಕೊಂಡಿದೆ.
ರಸ್ತೆ ವಿಸ್ತರಣೆಗೆ ಹಂಪಿ, ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡರೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಬಸವಣ್ಣ ಕಾಲುವೆ, ಚಿತ್ತವಾಡ್ಗಿ ಸಂಪರ್ಕ ರಸ್ತೆವನ್ನು ಅಗೆಯಲಾಗಿದೆ. ಅನಂತಶಯನಗುಡಿ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಂಡರೂ ರಸ್ತೆ ದುರಸ್ತಿಗೊಳಿಸಿಲ್ಲ. ಇದರಿಂದಾಗಿ ರಸ್ತೆಯ ತುಂಬೆಲ್ಲ ಹೊಂಡಗಳು ನಿರ್ಮಾಣವಾಗಿವೆ.

ಹೈದರಾಬಾದ್‌, ಕಲಬುರ್ಗಿ, ರಾಯಚೂರು, ಮಂತ್ರಾಲಯ ಸೇರಿದಂತೆ ಹಲವು ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ, ದರೋಜಿ ಕರಡಿಧಾಮ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ವಿಶ್ವವಿಖ್ಯಾತ ಹಂಪಿ ಕೂಡ ಇದೇ ಭಾಗದಲ್ಲಿ ಇರುವುದರಿಂದ ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ಸದಾ ವಾಹನ ದಟ್ಟಣೆ ಇರುತ್ತದೆ. ಹೀಗಿದ್ದರೂ ಈ ರಸ್ತೆಯನ್ನು ದುರಸ್ತಿಗೊಳಿಸಿಲ್ಲ. ಹೀಗಾಗಿ ಈ ರಸ್ತೆಯ ಎರಡೂ ಬದಿಯಲ್ಲಿರುವ ಮನೆಗಳವರು, ದಾರಿಹೋಕರು ಕಂಗೆಟ್ಟಿ ಹೋಗಿದ್ದಾರೆ. ವಾಹನ ಸವಾರರು ನಿತ್ಯ ಸರ್ಕಸ್‌ ನಡೆಸಬೇಕಾಗಿದೆ.

ಅನಂತಶಯನಗುಡಿಯಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರವರ್ತುಲ ರಸ್ತೆಯ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅದಿರಿನ ಗಣಿಗಳು, ಕಂಪನಿಗಳು ಸೇರಿದಂತೆ ಆಂಧ್ರದ ಪ್ರಮುಖ ನಗರಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಭಾರಿ ಸೇರಿದಂತೆ ಎಲ್ಲ ರೀತಿಯ ವಾಹನಗಳು ಸದಾ ಈ ಮಾರ್ಗದಿಂದ ಓಡಾಡುತ್ತಿರುತ್ತವೆ. ಹೀಗಿದ್ದರೂ ಈ ರಸ್ತೆಯನ್ನು ದುರಸ್ತಿಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಒಂದೆಡೆ ದೂಳು, ಮತ್ತೊಂದೆಡೆ ಆಳುದ್ದದ ತಗ್ಗು, ಗುಂಡಿಗಳಿಂದ ವಾಹನ ಸವಾರರು ಹೈರಾಣ ಆಗುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳಿಂದ ನೆಮ್ಮದಿ ಹಾಳು ಮಾಡಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.

‘ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಿದ ನಂತರ ಇನ್ನೊಂದು ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಎಲ್ಲ ಕಡೆ ಒಂದೇ ಬಾರಿಗೆ ಕೆಲಸ ಕೈಗೆತ್ತಿಕೊಂಡಿದ್ದರಿಂದ ರಸ್ತೆಗಳೆಲ್ಲ ಹಾಳಾಗಿವೆ. ಎಲ್ಲೆಡೆ ದೂಳು ಆವರಿಸಿಕೊಂಡಿದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಓಡಾಡುವುದೇ ಕಷ್ಟವಾಗಿದೆ’ ಎಂದು ಪಾಂಡುರಂಗ ಕಾಲೊನಿಯ ಸುರೇಶ್‌ ಹೇಳಿದರು.

‘ಅನಂತಶಯನಗುಡಿ ರಸ್ತೆಯಲ್ಲಿ ಕೆಲಸ ಮುಗಿದು ಎರಡ್ಮೂರು ತಿಂಗಳಾದರೂ ಗುಂಡಿಗಳನ್ನು ಮುಚ್ಚಿಲ್ಲ. ರಸ್ತೆಗಳನ್ನು ದುರಸ್ತಿಪಡಿಸಿಲ್ಲ. ಇಲ್ಲಿಯೇ ರೈಲ್ವೆ ಗೇಟ್‌ ಇರುವುದರಿಂದ ಸದಾ ವಾಹನ ದಟ್ಟಣೆ ಉಂಟಾಗಿ, ಎಲ್ಲೆಡೆ ದೂಳು ಹರಡುತ್ತದೆ. ಈ ಭಾಗದಲ್ಲಿ ಓಡಾಡುವುದು ನರಕಯಾತನೆ ಆಗಿದೆ. ಆರಂಭದಲ್ಲಿ ಕೆಲವು ದಿನ ನಿತ್ಯ ನೀರು ಸಿಂಪಡಿಸುತ್ತಿದ್ದರು. ಈಗ ಅದು ಕೂಡ ಮಾಡುತ್ತಿಲ್ಲ’ ಎಂದು ತಿಳಿಸಿದರು.

‘ಬಸವಣ್ಣ ಕಾಲುವೆಗೆ ಹೊಂದಿಕೊಂಡಂತೆ ಇರುವ ರಸ್ತೆ ಬಹಳ ಕಿರಿದಾಗಿದೆ. ಈ ರಸ್ತೆಯಲ್ಲಿ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ, ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಈಗಷ್ಟೇ ಚಳಿಗಾಲ ಆರಂಭವಾಗಿದ್ದು, ಗಾಳಿ ಬೀಸುತ್ತಿರುವುದರಿಂದ ಎಲ್ಲೆಡೆ ದೂಳು ಹರಡುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಚಪ್ಪರದಹಳ್ಳಿಯ ರಾಜು ಆಗ್ರಹಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !