ಮಂಗಳವಾರ, ನವೆಂಬರ್ 19, 2019
22 °C

ವಿಜಯನಗರ ಜಿಲ್ಲೆ ಜನರ ಒತ್ತಾಸೆ: ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ

Published:
Updated:
Prajavani

ಹೊಸಪೇಟೆ: ‘ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ಮಾಡಬೇಕು ಎನ್ನುವುದು ಜನರ ಒತ್ತಾಸೆಯಾಗಿದ್ದು, ಸರ್ಕಾರ ಅದಕ್ಕೆ ಸ್ಪಂದಿಸಬೇಕು’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ಗುರುವಾರ ರಾತ್ರಿ ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ಆನಂದ್‌ ಸಿಂಗ್‌ ಅವರ ಯಜಮಾನಿಕೆಗೆ  ವಿಜಯನಗರ ಜಿಲ್ಲೆ ಆಗಬೇಕಿಲ್ಲ. ಅದು ಜನರ ಆಸೆಯಾಗಿದೆ. ಅದಕ್ಕೆ ಎಲ್ಲರೂ ಬೆಂಬಲಿಸಬೇಕು’ ಎಂದು ತಿಳಿಸಿದರು.

‘ತೆಲಂಗಾಣ ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದಾಗ ಕೇವಲ ಏಳೆಂಟು ಜಿಲ್ಲೆಗಳಿದ್ದವು. ನಂತರ ಅನೇಕ ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ಬಹಳ ವಿಶಾಲವಾಗಿದೆ. ಇಂದಿಗೂ ಎಷ್ಟೋ ಜನ ಬಳ್ಳಾರಿಯ ಮುಖವೇ ನೋಡಿಲ್ಲ. ಜನರ ಅನುಕೂಲದ ದೃಷ್ಟಿಯಿಂದ, ಸುದೀರ್ಘ ಇತಿಹಾಸ ಹೊಂದಿರುವ ವಿಜಯನಗರದ ಹೆಸರಿನಲ್ಲಿ ಜಿಲ್ಲೆ ಮಾಡಿದರೆ ಜನರ ಭಾವನೆಗಳಿಗೆ ಸ್ಪಂದಿಸಿದಂತಾಗುತ್ತದೆ’ ಎಂದರು.

‘ಜಿಲ್ಲೆ ವಿಚಾರದಲ್ಲಿ ರಾಜಕಾರಣಿಗಳು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಬಾರದು. ಕೋಲು ಮುರಿಯಬಾರದು, ಹಾವು ಸಾಯಬಾರದು ಎಂಬ ನಿಟ್ಟಿನಲ್ಲಿ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ. ಅದು ಸರಿಯಾದುದಲ್ಲ. ಜನರ ಭಾವನೆಗಳಿಗೆ ಬೆಲೆ ಕೊಡಬೇಕು’ ಎಂದು ಆಗ್ರಹಿಸಿದರು.

‘ಹೊಸಪೇಟೆ ಸೃಜನಶೀಲತೆಯ ತವರೂರು. ಇಲ್ಲಿನ ಮಣ್ಣಿನಲ್ಲಿ ವಿಶೇಷ ಗುಣವಿದೆ. ಅದರ ಹೆಸರು ಚಿರಸ್ಥಾಯಿ ಆಗಬೇಕಾದರೆ ಅದರ ಹೆಸರಿನಲ್ಲೇ ಜಿಲ್ಲೆ ಮಾಡುವುದು ಸೂಕ್ತ. ಅದನ್ನು ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಒಂದು ಭಾಷೆ, ಒಂದು ಧರ್ಮ ಹೇರುವ ಹುನ್ನಾರ ನಡೆಸುತ್ತಿರುವುದು ಬಹಳ ಅಪಾಯಕಾರಿ. ಭಾರತ ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಅನೇಕ ಧರ್ಮ, ಭಾಷೆಗಳನ್ನಾಡುವ ಜನರಿದ್ದಾರೆ. ಹೀಗಿರುವಾಗ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಕನ್ನಡ ಅಲ್ಲಲ್ಲಿ ಉಳಿದಿದೆ. ಆರ್ಥಿಕ, ರಾಜಕೀಯ ಅಪರಾಧಿಗಳನ್ನು ಸರ್ಕಾರ ಬಿಡುತ್ತದೆ. ಆದರೆ, ಕನ್ನಡಕ್ಕಾಗಿ ಹೋರಾಡಿದವರ ವಿರುದ್ಧ ಮೊಕದ್ದಮೆಗಳನ್ನು ಹಾಕಿರುವುದು ಸರಿಯಲ್ಲ. ಅವುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರಾಧ್ಯಾಪಕ ಚಂದ್ರಶೇಖರ ಶಾಸ್ತ್ರಿ ಮಾತನಾಡಿ, ‘ಕನ್ನಡಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿದೆ. ಅದು ಹರಿಯುವ ನೀರು. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ’ ಎಂದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಾಂಜಿನೇಯ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಕಟ್ಟೆಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಷಣ್ಮುಖಪ್ಪ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ವಿನೋದಕುಮಾರ್‌, ಮುಖಂಡರಾದ ಚಂದ್ರಶೇಖರ್‌, ಕೆ.ವಿ. ರಾಜು, ಸೊಪ್ಪಿನಮಠ, ಚಂದ್ರಕಾಂತ ಕಾಮತ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ವೇದಿಕೆಯ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‌ ರ್‍ಯಾಲಿ ನಡೆಸಿದರು.

ಪ್ರತಿಕ್ರಿಯಿಸಿ (+)