ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ನಿಯಮ ಮೀರಿ ಫೋಟೊ ಶೂಟ್‌

ಸ್ಮಾರಕದೊಳಗೆ ಬೇಕಾಬಿಟ್ಟಿ ಓಡಾಡಿ ಚಿತ್ರೀಕರಣ: ಕಣ್ಮುಚ್ಚಿ ಕುಳಿತ ಪುರಾತತ್ವ ಇಲಾಖೆ
Last Updated 22 ನವೆಂಬರ್ 2020, 20:26 IST
ಅಕ್ಷರ ಗಾತ್ರ

ಹೊಸಪೇಟೆ: ಪ್ರಸಿದ್ಧ ಹಂಪಿಯ ಸಂರಕ್ಷಿತ ಸ್ಮಾರಕದೊಳಗೆ ನಿಯಮ ಮೀರಿ ವಿವಾಹಪೂರ್ವ (ಪ್ರಿ ವೆಡ್ಡಿಂಗ್‌) ಫೋಟೊ ಶೂಟ್‌ ನಡೆಸಿರುವುದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡ ನಂತರ ಗೊತ್ತಾಗಿದೆ.

ಆಂಧ್ರ ಪ್ರದೇಶದ ಜಾಹ್ನವಿ ಮತ್ತು ಸಿದ್ಧಾಂತ ಅವರ ವಿವಾಹಪೂರ್ವ ಫೋಟೊ ಶೂಟ್‌ಗೆ ಸಂಬಂಧಿಸಿದ ವಿಡಿಯೊ ಅನ್ನು ವಿಜಯಿ ಸ್ಯಾಮಂಡ್ಕೊ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಹರಿದಾಡುತ್ತಿದೆ. 2 ನಿಮಿಷ 49 ಸೆಕೆಂಡಿನ ಈ ವಿಡಿಯೊವನ್ನು 20 ಸಾವಿರಕ್ಕೂ ಅಧಿಕ ಜನ ನೋಡಿ ಮೆಚ್ಚಿದ್ದಾರೆ. ಅಕ್ಟೋಬರ್‌ 10ರಿಂದ 15ರ ನಡುವೆ ಈ ಚಿತ್ರೀಕರಣ ನಡೆಸಲಾಗಿದೆ ಎಂದು ಗೊತ್ತಾಗಿದೆ.

ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ, ಕಮಲ ಮಹಲ್‌ ಹಾಗೂ ಮಹಾನವಮಿ ದಿಬ್ಬ ಬಳಿಯಿರುವ ಪುಷ್ಕರಣಿಯಂಥ ಸಂರಕ್ಷಿತ ಸ್ಮಾರಕಗಳಲ್ಲಿ ಚಿತ್ರ ತೆಗೆಯಲಾಗಿದೆ. ಮಕ್ಕಳು ಸೇರಿದಂತೆ ಯಾರಿಗೂ ಸ್ಮಾರಕದ ಒಳಗಡೆ ಪ್ರವೇಶವಿಲ್ಲ. ಸಪ್ತಸ್ವರ ಹೊರಹೊಮ್ಮಿಸುವ ಕಂಬಗಳನ್ನು ಯಾರೂ ಮುಟ್ಟುವಂತಿಲ್ಲ. ಆದರೆ, ಕಂಬಗಳನ್ನು ಹಿಡಿದುಕೊಂಡು ಚಿತ್ರೀಕರಣ ನಡೆಸಲು ಅವಕಾಶ ಕಲ್ಪಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

‘ಹಂಪಿಯ ಪ್ರತಿಯೊಂದು ಸ್ಮಾರಕಗಳ ಬಳಿ ಐದಾರು ಜನ ಭದ್ರತಾ ಸಿಬ್ಬಂದಿ ಯಾವಾಗಲೂ ಇರುತ್ತಾರೆ. ಸ್ಮಾರಕಗಳಲ್ಲಿ ಮನಬಂದಂತೆ ಓಡಾಡಿ ಚಿತ್ರೀಕರಿಸಿರುವುದಾದರೂ ಹೇಗೆ? ಪ್ರಭಾವಿ ವ್ಯಕ್ತಿಗಳಾಗಿರಬಹುದು, ಇಲ್ಲವೇ ಇಲ್ಲಿಯ ಸಿಬ್ಬಂದಿ ಹಣ ತೆಗೆದುಕೊಂಡು ಅವಕಾಶ ಕಲ್ಪಿಸಿರಬಹುದು’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಆರೋಪಿಸಿದ್ದಾರೆ.

‘ಈ ವಿಡಿಯೊ ನೋಡಿದರೆ ಡ್ರೋನ್‌ ಕೂಡ ಉಪಯೋಗಿಸಿದಂತೆ ಕಾಣಿಸುತ್ತಿದೆ. ಹಂಪಿಯಲ್ಲಿ ಯಾವುದಾದರೂ ಸ್ಮಾರಕದ ಬಳಿ ಫೋಟೊ ಶೂಟ್‌ ಮಾಡಬೇಕಾದರೆ ದಿನಕ್ಕೆ ₹1 ಲಕ್ಷ ಶುಲ್ಕ ಇದೆ. ಆದರೆ, ಟ್ರೈಪಾಡ್‌ ಬಳಸಬಾರದು. ಸ್ಮಾರಕದೊಳಗೆ ಹೋಗಬಾರದು ಎನ್ನುವ ನಿಯಮವಿದೆ. ಆದರೆ, ಅದನ್ನೆಲ್ಲ ಗಾಳಿಗೆ ತೂರಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಗೆ ದೂರು ಕೊಡಲು ಸಿದ್ಧತೆ ನಡೆಸಿರುವೆ’ ಎಂದು ಅವರು ತಿಳಿಸಿದ್ದಾರೆ.

**

ನಿಯಮ ಮೀರಿ ಹಂಪಿ ಸ್ಮಾರಕದೊಳಗೆ ಚಿತ್ರೀಕರಣ ಮಾಡಿದವರು, ಅದಕ್ಕೆ ಅವಕಾಶ ಕೊಟ್ಟಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
-ವಿಶ್ವನಾಥ ಮಾಳಗಿ, ಅಧ್ಯಕ್ಷ, ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ

**

ಹಂಪಿ ಸ್ಮಾರಕದೊಳಗೆ ಫೋಟೊ ಶೂಟ್‌ಗೆ ನಿಷೇಧವಿದೆ. ಒಂದುವೇಳೆ ಯಾರಾದರೂ ಮಾಡಿದರೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.
-ಪಿ. ಕಾಳಿಮುತ್ತು, ಡೆಪ್ಯುಟಿ ಸೂಪರಿಟೆಂಡೆಂಟ್‌, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT