ಮಂಗಳವಾರ, ಜನವರಿ 18, 2022
15 °C
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 21ಕ್ಕೆ ಚುನಾವಣೆ ನಿಗದಿ

ಹೊಸಪೇಟೆ ನಗರಸಭೆ ಗದ್ದುಗೆ ಏರಲು ಕಸರತ್ತು ತೀವ್ರ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜ. 21ರಂದು ಚುನಾವಣೆ ನಿಗದಿಯಾದ ಬೆನ್ನಲ್ಲೇ ಗದ್ದುಗೆ ಏರಲು ರಾಜಕೀಯ ಪಕ್ಷಗಳಲ್ಲಿ ಕಸರತ್ತು ತೀವ್ರಗೊಂಡಿದೆ.

ಅದರಲ್ಲೂ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬ ಹಟಕ್ಕೆ ಬಿದ್ದಿವೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಕಾರಣಕ್ಕಾಗಿ ಸುಲಭವಾಗಿ ಅಧಿಕಾರ ಹಿಡಿಯಬಹುದು ಎಂಬುದು ಬಿಜೆಪಿಯ ಅತಿಯಾದ ವಿಶ್ವಾಸ. ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಪ್ರಮುಖ ಮುಖಂಡರು ಇಲ್ಲ. ಆದರೆ, ಪಕ್ಷೇತರರು ಕಾಂಗ್ರೆಸ್‌ ಬೆಂಬಲಿಸುತ್ತಾರೆ ಎಂಬ ಭರವಸೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು ಇದ್ದಾರೆ. ಅದು ಎಷ್ಟರಮಟ್ಟಿಗೆ ಫಲ ಕೊಡುತ್ತದೆ ನೋಡಬೇಕಿದೆ.

ಇಷ್ಟು ದಿನ ಮೌನ ವಹಿಸಿದ್ದ ಬಿಜೆಪಿ ಮುಖಂಡರಾದ ಎಚ್‌.ಆರ್‌. ಗವಿಯಪ್ಪ, ರಾಣಿ ಸಂಯುಕ್ತಾ ಕೂಡ ಸಕ್ರಿಯರಾಗಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಹಲವು ಪಕ್ಷೇತರರನ್ನು ಅವರು ಸಂಪರ್ಕ ಸಾಧಿಸಿದ್ದಾರೆ. ಎಲ್ಲರಿಗೆ ಸಮ್ಮತಿ ಇರುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಗೆಲ್ಲಿಸಿ ಆನಂದ್‌ ಸಿಂಗ್‌ ಅವರ ಪ್ರಭಾವದಿಂದ ದೂರ ಇರಿಸಲು ಪ್ರಯತ್ನ ಆರಂಭಿಸಿದ್ದಾರೆ. ಅದಕ್ಕೆ ಹಲವರ ಒಪ್ಪಿಗೆ ಸಿಕ್ಕಿದೆ ಎಂದು ಗೊತ್ತಾಗಿದೆ.

ಒಟ್ಟು 35 ಸದಸ್ಯ ಬಲದ ನಗರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 12, ಪಕ್ಷೇತರರು 12, ಬಿಜೆಪಿ 10, ಎಎಪಿಯ ಒಬ್ಬರು ಜಯಶಾಲಿಯಾಗಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಒಂಬತ್ತು ಜನ ಪಕ್ಷೇತರರು, ಎಎಪಿಯ ಒಬ್ಬ ಸದಸ್ಯರು ಬಿಜೆಪಿ ಸೇರಿದ್ದರು. ಇದರೊಂದಿಗೆ ಬಿಜೆಪಿಯ ಬಲ 20ಕ್ಕೆ ಹೆಚ್ಚಿದೆ. ಸಂಖ್ಯಾಬಲ ನೋಡಿದರೆ ಆ ಪಕ್ಷದವರೇ ಅಧ್ಯಕ್ಷ, ಉಪಾಧ್ಯಕ್ಷರಾಗುವ ಸಾಧ್ಯತೆ ಹೆಚ್ಚು. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಬಿಜೆಪಿ ಮಾರ್ಗ ಸುಲ‌ಭವಲ್ಲ ಎಂದು ಹೇಳಲಾಗುತ್ತಿದೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಬಿಜೆಪಿಯಿಂದ 4ನೇ ವಾರ್ಡಿನಿಂದ ಗೆದ್ದಿರುವ ಸುಂಕಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಜಯಿಸಿ, ಬಳಿಕ ಬಿಜೆಪಿ ಸೇರಿದ 18ನೇ ವಾರ್ಡಿನ ಕಿರಣ್‌ ಅವರಿಗೆ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ. ಕಿರಣ್‌, ಹಿಂದೆ ಬಿಜೆಪಿ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷರಾಗಿದ್ದರು. ಈಗ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಯುವಕರನ್ನು ಮುಂಚೂಣಿಗೆ ತರುವ ಲೆಕ್ಕಾಚಾರ ಬಿಜೆಪಿಯದ್ದು. ಕಿರಣ್‌, ಕೂಡ ಉಪಾಧ್ಯಕ್ಷ ಸ್ಥಾನದ ಷರತ್ತು ಹಾಕಿಯೇ ಪಕ್ಷ ಸೇರಿದ್ದರು ಎಂದು ಗೊತ್ತಾಗಿದೆ.

ಕಾಂಗ್ರೆಸ್‌ನಿಂದ 7ನೇ ವಾರ್ಡಿನಿಂದ ಗೆದ್ದಿರುವ ಕನಕಮ್ಮ ಅವರನ್ನು ಪಕ್ಷ ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಖಾರದಪುಡಿ ಮಹೇಶ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಎರಡೂ ಹುದ್ದೆಗಳ ಮೇಲೆ ಹಲವರು ಕಣ್ಣು ಇಟ್ಟಿರುವುದರಿಂದ ಪಕ್ಷೇತರರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪಕ್ಷೇತರರ ತೀರ್ಮಾನವೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು