ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ |ಲಾಕ್‌ಡೌನ್‌ ನಡುವೆ ದಕ್ಷ ಅಧಿಕಾರಿ ಎತ್ತಂಗಡಿಗೆ ತೆರೆಮರೆಯಲ್ಲಿ ಪ್ರಯತ್ನ

ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ
ಅಕ್ಷರ ಗಾತ್ರ

ಹೊಸಪೇಟೆ: ಕೊರೊನಾ ಲಾಕ್‌ಡೌನ್‌ ಬಿಕ್ಕಟ್ಟಿನ ನಡುವೆ ದಕ್ಷ ಪೊಲೀಸ್‌ ಅಧಿಕಾರಿ ಎತ್ತಂಗಡಿಗೆ ತೆರೆಮರೆಯಲ್ಲೇ ಪ್ರಯತ್ನಗಳು ನಡೆದಿವೆ.

ಕಡಿಮೆ ಅವಧಿಯಲ್ಲಿ ನಗರಸಭೆಯಲ್ಲಿ ಸಾಕಷ್ಟು ಸುಧಾರಣೆ ತಂದಿರುವ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರ ಎತ್ತಂಗಡಿಗೆ ಲಾಕ್‌ಡೌನ್‌ಗೂ ಮುನ್ನ ಬಿರುಸಿನ ಪ್ರಯತ್ನಗಳು ನಡೆದಿದ್ದವು. ಆ ವಿಷಯ ‘ಪ್ರಜಾವಾಣಿ’ಯಲ್ಲಿ ಸುದ್ದಿಯಾಗುತ್ತಿದ್ದಂತೆ ಅದನ್ನು ಕೈಬಿಡಲಾಯಿತು.

9 ತಿಂಗಳ ಹಿಂದೆ ಡಿವೈಎಸ್ಪಿ ಆಗಿ ನಗರಕ್ಕೆ ಬಂದ ವಿ. ರಘುಕುಮಾರ ಎತ್ತಂಗಡಿಗೆ ಈಗ ಯತ್ನ ನಡೆದಿದೆ. ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಮೇಲೆ ಅವರ ಆಪ್ತರು ಒತ್ತಡ ಹೇರಿ ರಘುಕುಮಾರ ಅವರನ್ನು ಬೇರೆಡೆ ವರ್ಗಾವಣೆಗೊಳಿಸಲು ಮುಂದಾಗಿದ್ದಾರೆ. ರಘುಕುಮಾರ ಜಾಗಕ್ಕೆ ಸದ್ಯ ಎಸಿಬಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀಧರ್‌ ದೊಡ್ಡಿ ಅವರನ್ನು ತರಲು ಸಿದ್ಧತೆಗಳು ನಡೆದಿವೆ ಎಂದು ತಿಳಿದು ಬಂದಿದೆ.

ಕಾನೂನಿನ ಚೌಕಟ್ಟಿನಡಿ ಕೆಲಸ ನಿರ್ವಹಿಸುತ್ತಿರುವುದೇ ರಘುಕುಮಾರಗೆ ಸದ್ಯ ಮುಳುವಾಗಿದೆ. ರಾಜಕೀಯ ಹಸ್ತಕ್ಷೇಪವನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸದೇ ಕೆಲವರು ಅವರ ಎತ್ತಂಗಡಿಗೆ ಲಾಬಿ ನಡೆಸಿದ್ದು, ಸಚಿವರ ಆಪ್ತರ ಮೂಲಕ ಆ ಕೆಲಸ ಸಾಧಿಸಲು ಯತ್ನಿಸಿದ್ದಾರೆ ಎಂದು ಗೊತ್ತಾಗಿದೆ.

9 ತಿಂಗಳಲ್ಲಿ ರಘುಕುಮಾರ ಮಾಡಿದ್ದೇನು?:2019ರ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದ ರಘುಕುಮಾರ, ಇಲಾಖೆಯಲ್ಲಿ ಮನೆ ಮಾಡಿದ್ದ ಭ್ರಷ್ಟಾಚಾರ ಹೋಗಲಾಡಿಸಿ, ಸಿಬ್ಬಂದಿಯಲ್ಲಿ ಸಮಯ ಪಾಲನೆ, ಶಿಸ್ತು ಮೂಡಿಸಿದ್ದಾರೆ. ಅದಾದ ಬಳಿಕ ನಗರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿದರು. ಇಲಾಖೆಯ ಕಡೆಗೆ ಯಾರೂ ಬೊಟ್ಟು ಮಾಡಿ ತೋರಿಸಬಾರದು ಎಂದು ಮೊದಲು ಸಿಬ್ಬಂದಿಗೆ ಕಡ್ಡಾಯ ಮಾಡಿದರು. ಸ್ವತಃ ಅವರೇ ಪ್ರಮುಖ ವೃತ್ತಗಳಲ್ಲಿ ನಿಂತು ಅದರ ಮಹತ್ವ ತಿಳಿಸಿದರು. ಬಳಿಕ ಜನ ಕೇಳದಿದ್ದಾಗ ‘ದಂಡ’ ಪ್ರಯೋಗಿಸಿದರು. ರಾಜಕೀಯ ಹಸ್ತಕ್ಷೇಪದಿಂದ ಬಳಿಕ ಆ ನಿಯಮ ಸಡಿಲಗೊಂಡಿತು.

ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಎಲ್ಲ ರೀತಿಯ ಮಳಿಗೆಗಳನ್ನು ಮುಚ್ಚಿಸಿ, ಸ್ವತಃ ರಘುಕುಮಾರ ಅವರೇ ಗಸ್ತು ತಿರುಗಲು ಆರಂಭಿಸಿದರು. ಪ್ರಮುಖ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಿದರು. ಅಕ್ರಮ ಮದ್ಯ ಮಾರಾಟ, ಜೂಜಾಟ, ವೇಶ್ಯಾವಾಟಿಕೆ ನಿಯಂತ್ರಿಸಿದರು.

ಡಿಸೆಂಬರ್‌ನಲ್ಲಿ ಸುಸೂತ್ರವಾಗಿ ಉಪಚುನಾವಣೆ ನಡೆಸಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ನಗರದಲ್ಲಿ ಪರ–ವಿರೋಧದಿಂದ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಿದರು.

ನಗರದಲ್ಲಿ 11 ಕೊರೊನಾ ಸೋಂಕಿತರು ಪತ್ತೆಯಾದಾಗ ಯಶಸ್ವಿಯಾಗಿ ಲಾಕ್‌ಡೌನ್‌ ನಿಯಮ ಜಾರಿಗೆ ತಂದರು. ಹಗಲಿರುಳು ಪೊಲೀಸ್ ಸಿಬ್ಬಂದಿಯೊಡನೆ ಗಸ್ತು ತಿರುಗಿ ಜನ ಮನೆಗಳಿಂದ ಹೊರಬರದಂತೆ ಎಚ್ಚರ ವಹಿಸಿದರು. ಜನ ಅಂತರದಿಂದ ವ್ಯವಹರಿಸಲು ಮಾರುಕಟ್ಟೆಯಲ್ಲಿ ಕಟ್ಟುನಿಟ್ಟಿನ ನಿಯಮ ತಂದರು. ಪೊಲೀಸರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿರುವ ಗೃಹರಕ್ಷಕರಿಗೆ ವೇತನ ಸಿಕ್ಕಿಲ್ಲ ಎನ್ನುವ ವಿಷಯ ತಿಳಿದು ದಾನಿಗಳನ್ನು ಸಂಪರ್ಕಿಸಿ ಅವರಿಗೆ ರೇಷನ್‌ ಕಿಟ್‌ ಕೊಡಿಸಿದರು. ಪೊಲೀಸರು, ಗೃಹರಕ್ಷಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಳಿಗೆ ವಿತರಿಸಿದರು.

ಸಿಬ್ಬಂದಿಯ ವಿಶ್ವಾಸ ಗಳಿಸಿ, ಲಾಕ್‌ಡೌನ್‌ನಲ್ಲಿ ಉತ್ತಮ ಕೆಲಸ ಮಾಡಿ ಜನರ ಮನ ಗೆದ್ದಿದ್ದಾರೆ. ನಗರವು ಕಂಟೈನ್ಮೆಂಟ್‌ ಪ್ರದೇಶದಿಂದ ಮುಕ್ತವಾಗುತ್ತಿದ್ದಂತೆ ಪ್ರಶಂಸೆಯ ಸುರಿಮಳೆ ಆಗಿದೆ. ರಘುಕುಮಾರ ಸೇರಿದಂತೆ ಇತರೆ ಅಧಿಕಾರಿಗಳಿಗೆ ಧನ್ಯವಾದ ಹೇಳಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಹಂಚಿಕೊಳ್ಳುತ್ತಿದ್ದು, ಅದು ಅವರ ಜನಪ್ರಿಯತೆಗೆ ಸಾಕ್ಷಿ.

*
ಯಾವ ಅಧಿಕಾರಿಯ ವರ್ಗಾವಣೆ ಬಗ್ಗೆ ಆಲೋಚನೆಯೂ ಮಾಡಿಲ್ಲ. ನನ್ನ ಆಪ್ತರ್‍ಯಾರಿಗೂ ಅಧಿಕಾರಿಗಳ ವರ್ಗಾವಣೆ ಮಾಡುವ ಅಧಿಕಾರ ಕೊಟ್ಟಿಲ್ಲ.
–ಆನಂದ್‌ ಸಿಂಗ್‌, ಅರಣ್ಯ ಸಚಿವ
*
ನನ್ನ ವರ್ಗಾವಣೆಗೆ ಪ್ರಯತ್ನ ನಡೆಯುತ್ತಿವೆ ಎಂದು ಕೆಲವರಿಂದ ಕೇಳಿಪಟ್ಟಿದ್ದೇನೆ. ಆದರೆ, ಸರ್ಕಾರ ಎಲ್ಲಿ ನಿಯೋಜಿಸಿದರೂ ಕೆಲಸ ಮಾಡಲು ನಾನು ಸಿದ್ಧ.
–ವಿ. ರಘುಕುಮಾರ, ಡಿವೈಎಸ್ಪಿ

*
ಹೊಸಪೇಟೆಯಲ್ಲಿ ಒಳ್ಳೆಯ ಅಧಿಕಾರಿಗಳ ತಂಡವಿದೆ. ಲಾಕ್‌ಡೌನ್‌ನಲ್ಲಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಡಿವೈಎಸ್ಪಿ ಸೇರಿ ಯಾರ ಎತ್ತಂಗಡಿ ಮಾಡಬಾರದು.
–ಮರಡಿ ಜಂಬಯ್ಯ ನಾಯಕ, ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT