ಅಟಲ್‌ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ

7
ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳಿಂದ ಗೌರವ ಸಮರ್ಪಣೆ

ಅಟಲ್‌ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ

Published:
Updated:
Deccan Herald

ಹೊಸಪೇಟೆ: ಗುರುವಾರ ಸಂಜೆ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ನಗರದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದವು.

ಹಂಪಿ ಕನ್ನಡ ವಿಶ್ವವಿದ್ಯಾಲಯ:
ಎರಡು ನಿಮಿಷ ಮೌನ ಆಚರಿಸಿ, ಅಗಲಿದ ನಾಯಕಿನಿಗೆ ಸಿಬ್ಬಂದಿ ವರ್ಗ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿದ ಕುಲಸಚಿವ ಪಿ. ಮಹಾದೇವ, ‘ವಾಜಪೇಯಿ ಅವರು ಈ ದೇಶ ಕಂಡ ಶ್ರೇಷ್ಠ ಚಿಂತಕ, ದಾರ್ಶನಿಕ, ಕವಿ, ಪತ್ರಕರ್ತ, ವಾಗ್ಮಿ ಹಾಗೂ ರಾಜಕಾರಣಿಯಾಗಿದ್ದರು. ಅವರು ಮೂರು ಸಲ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದರು. ಲೋಕಸಭೆಗೆ ಹತ್ತು ಸಲ, ರಾಜ್ಯಸಭೆಗೆ ಎರಡು ಸಲ ಆಯ್ಕೆಯಾಗಿದ್ದರು’ ಎಂದು ನೆನಪಿಸಿಕೊಂಡರು.

ವಿಕಲಚೇತನರ ಸಂಘ:
ಮಯೂರಿ ಮಹಿಳಾ ವಿಕಲಚೇತನರ ಸಂಘದ ನಗರ, ಗ್ರಾಮೀಣ ಘಟಕದ ಪದಾಧಿಕಾರಿಗಳು ನಗರದಲ್ಲಿ ಸಭೆ ಸೇರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಎಲ್ಲರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಬಳಿಕ ಮಾತನಾಡಿದ ಸಂಘದ ಸಂಘಟನಾ ಸಲಹೆಗಾರ ಎನ್‌. ವೆಂಕಟೇಶ್‌, ‘ವಾಜಪೇಯಿ ಅವರು ರಾಜಕೀಯ ಮುತ್ಸದ್ಧಿಯಾಗಿದ್ದರು. ನೇರ, ನಡೆ ನುಡಿಯ ಮೇರು ವ್ಯಕ್ತಿತ್ವ ಅವರದಾಗಿತ್ತು. 1998ರಲ್ಲಿ ಅಣು ಬಾಂಬ್‌ ಪರೀಕ್ಷೆ ನಡೆಸಿ ಇಡೀ ಜಗತ್ತು ನಿಬ್ಬೆರಗಾಗುವಂತೆ ಮಾಡಿದ್ದರು. ಅವರ ಅಗಲಿಕೆಯಿಂದ ದೇಶಕ್ಕೆ ಬಹಳ ದೊಡ್ಡ ನಷ್ಟವಾಗಿದೆ’ ಎಂದರು.

ಸಂಘದ ಅಧ್ಯಕ್ಷ ಜಿ.ಮುಕ್ಕಣ್ಣ, ಪ್ರಮುಖರಾದ ಜಿ.ಅಂಜಿನಿ, ಕೆ.ರಾಜಸಾಬ್, ಟಿ.ಲೋಹಿತ್, ಶೇಖ್ ಮೆಹಬೂಬ್ ಬಾಷಾ, ಮಾಬಾಷಾ, ಹುಲುಗಪ್ಪ, ಪರಶುರಾಮ್, ಲವಕುಮಾರ್, ಮಹಮ್ಮದ್ ರಫೀಕ್, ಕೃಷ್ಣ, ದೇವರಾಜ್, ಬಸವರಾಜ್, ಮರಿತಿಮ್ಮಾಚಾರಿ, ಬಾಷಾ ಸಾಬ್, ಗಂಗಮ್ಮ, ಮೈಮುನ್ನಿಸಾ, ಷಮೀಮ್ ಬಾನು, ಮಂಜುಳಾ, ಗಾಯತ್ರಿ, ಶೀಲಾ, ಖಾಜಾ ಬನಿ, ತಾಯಮ್ಮ ಇದ್ದರು.

ಕಾಂಗ್ರೆಸ್:  ಇಲ್ಲಿನ ಪಟೇಲ್‌ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ರಾತ್ರಿ ಸಭೆ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ, ಮೇಣದ ಬತ್ತಿಗಳನ್ನು ಬೆಳಗಿಸಿ ಎರಡು ನಿಮಿಷ ಮೌನ ಆಚರಿಸಿದರು. ಮುಖಂಡರಾದ ನಿಂಬಗಲ್‌ ರಾಮಕೃಷ್ಣ, ತಾರಿಹಳ್ಳಿ ವೆಂಕಟೇಶ್‌, ಗುಜ್ಜಲ್‌ ನಾಗರಾಜ್‌, ಫಹೀಮ್‌ ಇದ್ದರು.

ಬಿಜೆಪಿ:  ನಗರದ ಬಿಜೆಪಿ ಕಚೇರಿಯಲ್ಲಿ ಅಗಲಿದ ನಾಯಕನಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು. ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮಾಧ್ಯಮ ವಿಭಾಗದ ಸಂಚಾಲಕ ಶಂಕರ್‌ ಮೇಟಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !