ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಮನೆಯಿಲ್ಲ, ಆನಂದ್‌ ಸಿಂಗ್‌ಗೆ ಅರಮನೆ

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ
Last Updated 28 ನವೆಂಬರ್ 2019, 16:00 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿಜಯನಗರ ಕ್ಷೇತ್ರದಲ್ಲಿ ನೂರಾರು ಬಡ ಜನರಿಗೆ ಮನೆಯಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಭವ್ಯ ಅರಮನೆ ಕಟ್ಟಿಸಿಕೊಂಡಿದ್ದಾರೆ. ಆ ಹಣ ಎಲ್ಲಿಂದ ಬಂತು? ಅದಕ್ಕೆ ಅವರು ಉತ್ತರ ಕೊಡಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು.

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಗುರುವಾರ ಸಂಜೆ ನಗರದ ಮುನ್ಸಿಪಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಆನಂದ್‌ ಸಿಂಗ್‌ ರಾಜಮನೆತನದವರಲ್ಲ. ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಹಣದಿಂದ ಅರಮನೆ ಕಟ್ಟಿಸಿದ್ದಾರೆ. ಜೈಲಿಗೆ ಹೋಗಿ ಬಂದಿರುವ ಇಂತಹವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

‘ಆನಂದ್‌ ಸಿಂಗ್‌ ಒಬ್ಬ ಜಮೀನ್ದಾರಿ ಮನಃಸ್ಥಿತಿ ಹೊಂದಿರುವ ವ್ಯಕ್ತಿ. ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿಸಿ ರೈತರಿಗೆ ದ್ರೋಹ ಬಗೆದಿದ್ದಾರೆ. ಅದನ್ನು ಆರಂಭಿಸಲು ಪ್ರಯತ್ನಿಸಿಲ್ಲ. ನಮ್ಮ ಸರ್ಕಾರ ಬಂದರೆ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

‘ವಿಜಯನಗರ ಜಿಲ್ಲೆ ಮಾಡುತ್ತೇನೆ ಎಂದು ಚುನಾವಣೆಯಲ್ಲಿ ಆನಂದ್‌ ಸಿಂಗ್‌ ಭರವಸೆ ಕೊಡುತ್ತಿದ್ದಾರೆ. ಅವರು ಹನ್ನೊಂದುವರೆ ವರ್ಷ ಶಾಸಕರಾಗಿ, ಸ್ವಲ್ಪ ಅವಧಿಗೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಒಮ್ಮೆಯೂ ವಿಜಯನಗರ ಜಿಲ್ಲೆ ಬಗ್ಗೆ ವಿಧಾನಸಭೆಯಲ್ಲಾಗಲಿ, ಅದರ ಹೊರಗಾಗಲಿ ಧ್ವನಿ ಎತ್ತಿಲ್ಲ. ಇದರ ಬಗ್ಗೆ ಏಕಾಏಕಿ ಧ್ವನಿ ಎತ್ತುತ್ತಿದ್ದಾರೆ. ಅದರ ಬಗ್ಗೆ ಬಿಜೆಪಿ ಶಾಸಕರಲ್ಲೇ ಒಮ್ಮತವಿಲ್ಲ. ಶಾಸಕರಾದ ಜಿ. ಕರುಣಾಕರ ರೆಡ್ಡಿ ಜಿಲ್ಲೆ ಮಾಡಲು ಬಿಡುವುದಿಲ್ಲ ಎಂದಿದ್ದಾರೆ. ಇದು ಆ ಪಕ್ಷದಲ್ಲಿನ ಗೊಂದಲ ತೋರಿಸುತ್ತಿದೆ’ ಎಂದರು.

‘ಆನಂದ್‌ ಸಿಂಗ್‌ ಅವರನ್ನು ಸುಪ್ರೀಂಕೋರ್ಟ್‌ ಅನರ್ಹಗೊಳಿಸಿದೆ. ಹೀಗಾಗಿ ಅವರು ಆನಂದ್‌ ಸಿಂಗ್‌ ಅಲ್ಲ, ಅನರ್ಹ ಸಿಂಗ್‌. ಮೂರು ಸಲ ಶಾಸಕರಾದರೂ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ. ಇಂತಹವರನ್ನು ದಯವಿಟ್ಟು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಬೇಡಿ’ ಎಂದು ಕೋರಿದರು.

ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಮಾತನಾಡಿ, ‘ರಜಪೂತ ಕೋಟೆ, ಅರಮನೆ ಕಟ್ಟಿಸಿಕೊಂಡಿರುವುದು ಬಿಟ್ಟರೆ ಜನರಿಗೆ ಆನಂದ್‌ ಸಿಂಗ್‌ ಏನೂ ಮಾಡಿಲ್ಲ. ಅವರ ಮನೆ ಮೇಲೆ ಬೂದಿ ಬೀಳುತ್ತದೆ, ವಾಸನೆ ಬರುತ್ತದೆ ಎಂದು ಕುತಂತ್ರ ಮಾಡಿ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT