ಶುಕ್ರವಾರ, ನವೆಂಬರ್ 22, 2019
27 °C
ಹಾಳಾದ ಬ್ಯಾಡ್ಮಿಂಟನ್‌ ಕೋರ್ಟ್‌, ದುರಸ್ತಿ ಕಾಣದ ಬ್ಯಾಟರಿಗಳು

ಒಳಾಂಗಣ ಕ್ರೀಡಾಂಗಣದಲ್ಲಿ ಸೌಕರ್ಯ ಮರೀಚಿಕೆ

Published:
Updated:
Prajavani

ಹೊಸಪೇಟೆ: ನಗರದ ಚಿತ್ತವಾಡ್ಗಿ ಸಮೀಪದ ಒಳಾಂಗಣ ಕ್ರೀಡಾಂಗಣದಲ್ಲಿ ಸೌಕರ್ಯಗಳು ಮರೀಚಿಕೆಯಾಗಿದ್ದು, ಕ್ರೀಡಾಪಟುಗಳು ತೊಂದರೆ ಅನುಭವಿಸುವಂತಾಗಿದೆ.

ಬ್ಯಾಡ್ಮಿಂಟನ್‌ ಕೋರ್ಟ್‌ ಹಾಳಾಗಿ ವರ್ಷಗಳೇ ಉರುಳುತ್ತ ಬಂದಿವೆ. ಅಷ್ಟೇ ಅಲ್ಲ, ಅದರೊಳಗಿನ ಬಹುತೇಕ ವಿದ್ಯುದ್ದೀಪಗಳು ಹಾಳಾಗಿವೆ. ಯಾವುದೂ ಕೂಡ ದುರಸ್ತಿ ಕಂಡಿಲ್ಲ. 

ನಿತ್ಯ ಬ್ಯಾಡ್ಮಿಂಟನ್‌ ಆಡಲು ಹಲವು ಮಂದಿ ಬಂದು ಹೋಗುತ್ತಾರೆ. ಕೋರ್ಟ್‌ ಬದಲಿಸುವಂತೆ ಹಲವು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನ ಹಾಳಾದ ಅಂಗಳದಲ್ಲೇ ಬ್ಯಾಡ್ಮಿಂಟನ್‌ ಆಡಿ ಹೋಗುತ್ತಿದ್ದಾರೆ. ಹಾಳಾದ ವಿದ್ಯುದ್ದೀಪಗಳನ್ನು ಬದಲಿಸಿ ಹೊಸದು ಅಳವಡಿಸದ ಕಾರಣ ಮಂದ ಬೆಳಕಿನಲ್ಲೇ ಆಟವಾಡುವ ಅನಿವಾರ್ಯತೆ ಇದೆ. 

ಇನ್ನೂ ಸುಸಜ್ಜಿತವಾದ ಜಿಮ್‌ ಇದ್ದರೂ ಅಲ್ಲಿ ಬ್ಯಾಟರಿ ವ್ಯವಸ್ಥೆ ಇಲ್ಲ. ಬ್ಯಾಟರಿಗಳು ಹಾಳಾಗಿ ಅನೇಕ ತಿಂಗಳುಗಳೇ ಕಳೆದಿವೆ. ನೇರ ವಿದ್ಯುತ್‌ ಸಂಪರ್ಕದಿಂದ ಟ್ರೆಡ್‌ಮಿಲ್‌ಗಳು ನಡೆಯುತ್ತಿವೆ. ಏಕಾಏಕಿ ವಿದ್ಯುತ್‌ ಪೂರೈಕೆ ಕಡಿತಗೊಂಡರೆ ಟ್ರೆಡ್‌ಮಿಲ್‌ ಮೇಲಿದ್ದವರ ಜೀವಕ್ಕೆ ಸಂಚಕಾರ ತಪ್ಪಿದ್ದಲ್ಲ. ಹೀಗಿದ್ದರೂ ಬ್ಯಾಟರಿ ದುರಸ್ತಿಗೆ ನಿರ್ಲಕ್ಷ್ಯ ತೋರಲಾಗುತ್ತಿದೆ.

‘ಪುರುಷರ ವಿಭಾಗದ ಜಿಮ್‌ನಲ್ಲಿ ಬ್ಯಾಟರಿಗಳು ಕೆಟ್ಟು ಹೋಗಿವೆ. ಮಹಿಳೆಯರ ವಿಭಾಗದಿಂದ ಜಿಮ್‌ಗೆ ಬರುವವರ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿನ ಬ್ಯಾಟರಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಜಿಮ್‌ ತರಬೇತುದಾರ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಅತ್ಯಾಧುನಿಕವಾದ ಹವಾನಿಯಂತ್ರಿತ ಸಭಾಂಗಣ ನಿರ್ಮಿಸಲಾಗಿದೆ. ಆದರೆ, ಅಲ್ಲಿ ಮಾತನಾಡಿದರೆ ಪ್ರತಿಧ್ವನಿ ಕೇಳಿಸುತ್ತದೆ. ಹೀಗಾಗಿ ಯಾರೊಬ್ಬರೂ ಕಾರ್ಯಕ್ರಮ ಮಾಡಲು ಮುಂದೆ ಬರುತ್ತಿಲ್ಲ. ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ಸಭಾಂಗಣ ಸೀಮಿತವಾಗಿದೆ. ಇದರಿಂದಾಗಿ ಕ್ರೀಡಾಂಗಣಕ್ಕೆ ಬರಬೇಕಾದ ಆದಾಯದಲ್ಲಿ ಖೋತಾ ಆಗುತ್ತಿದೆ.

‘ನಾನು ಅನೇಕ ವರ್ಷಗಳಿಂದ ಬ್ಯಾಡ್ಮಿಂಟನ್‌ ಆಡಲು ಬರುತ್ತೇನೆ. ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೋರ್ಟ್‌, ವಿದ್ಯುದ್ದೀಪಗಳು ಹಾಳಾಗಿ ಸಾಕಷ್ಟು ತಿಂಗಳಾದರೂ ಯಾರೊಬ್ಬರೂ ಗಮನ ಹರಿಸಿಲ್ಲ’ ಎಂದು ಪ್ರಶಾಂತ್‌ ಪ್ರತಿಕ್ರಿಯಿಸಿದರು.

‘ಟ್ರೆಡ್‌ಮಿಲ್‌ನಲ್ಲಿ ಕೆಲವರು ಬಹಳ ವೇಗವಾಗಿ ಓಡುತ್ತಾರೆ. ಹಠಾತ್ತಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡರೆ ಬೀಳುವ ಸಾಧ್ಯತೆ ಹೆಚ್ಚಿದೆ. ಬಿದ್ದು ಪ್ರಾಣ ಕೂಡ ಹೋಗಬಹುದು. ಅಂಥಹ ಘಟನೆಗಳು ಜರುಗುವುದಕ್ಕೂ ಮುನ್ನ ಎಚ್ಚೆತ್ತುಕೊಂಡು ಕೂಡಲೇ ಬ್ಯಾಟರಿ ವ್ಯವಸ್ಥೆ ಕಲ್ಪಿಸಬೇಕು’ ಎನ್ನುತ್ತಾರೆ ಜಿಮ್‌ನಲ್ಲಿ ಕಸರತ್ತು ಮಾಡಲು ಬಂದಿದ್ದ ರಾಜು.

ಪ್ರತಿಕ್ರಿಯಿಸಿ (+)