ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಮತಸ್ಥರಿಗೆ ಸಚಿವ ಸ್ಥಾನ ಕೊಡಿ: ಗಂಗಾಮತ ಸಂಘದ ಅಧ್ಯಕ್ಷ ಬಿ. ಮೌಲಾಲಿ

Last Updated 16 ಆಗಸ್ಟ್ 2021, 12:03 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯ ಸಚಿವ ಸಂಪುಟದಲ್ಲಿ ಗಂಗಾಮತ ಸಮಾಜದ ಒಬ್ಬ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ರಾಜ್ಯ ಗಂಗಾಮತ ಸಂಘದ ಅಧ್ಯಕ್ಷ ಬಿ. ಮೌಲಾಲಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ರಾತ್ರಿ ನಡೆದ ನೂತನ ವಿಜಯನಗರ ಜಿಲ್ಲೆಯ ಗಂಗಾಮತ ಸಮುದಾಯದ ಆರು ತಾಲ್ಲೂಕುಗಳ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನ ನಗರ್ತರ ಪೇಟೆಯಲ್ಲಿರುವ ಸಂಘದ ಜಾಗದಲ್ಲಿ ₹2 ಕೋಟಿಯಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ’ ಎಂದರು.

ಸಂಘದ ನೂತನ ಜಿಲ್ಲಾ ಅಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ‘ರಾಜ್ಯದಲ್ಲಿ 40 ಲಕ್ಷದಷ್ಟಿರುವ ಗಂಗಾಮತಸ್ಥರನ್ನು 37 ಪರ್ಯಾಯ ಹೆಸರುಗಳಿಂದ ಕರೆಯಲಾಗುತ್ತಿದೆ. ಅನೇಕ ಆಯೋಗಗಳು ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಶಿಫಾರಸು ಮಾಡಿವೆ. ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಸಿಕ್ಕಿಲ್ಲ’ ಎಂದರು.

‘ಗಂಗಾಮತಸ್ಥರು ಪರಿಶಿಷ್ಟ ಪಂಗಡದ ಸ್ಥಾನಮಾನ ಪಡೆಯಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರ ವಿಳಂಬ ಮಾಡದೆ ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ದೀರ್ಘಕಾಲದ ಬೇಡಿಕೆ ಈಡೇರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಸಂಘದ ಗೌರವ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ‘ರಾಜ್ಯದಲ್ಲಿ ಕುರುಬರ ನಂತರ ಗಂಗಾಮತ ಎರಡನೇ ದೊಡ್ಡ ಹಿಂದುಳಿದ ಸಮುದಾಯವಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಸಂಘಟನೆಯ ಕೊರತೆಯಿಂದ ಸಾಮಾಜಿಕ ನ್ಯಾಯದಿಂದ ವಂಚಿತವಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಜಿಲ್ಲಾ ಕೇಂದ್ರದಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಲ್.ಶ್ರೀಧರ, ಗಂಗಾಮತ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಗಾಳೆಪ್ಪ, ಮುಖಂಡರಾದ ಅಭಿಮನ್ಯು, ಕೂಡ್ಲಿಗಿ ಪಕೀರಪ್ಪ, ಎರಿಸ್ವಾಮಿ.ಕೆ, ಅಂಬಿಗರ ಮಂಜುನಾಥ, ಪ್ರಕಾಶ್ ತಲ್ಲೇರಿ, ಸರ್ದಾರ್ ಯಮನೂರಪ್ಪ, ಎಂ.ವಿಶ್ವನಾಥ, ಮೇಘರಾಜ, ಜಾಲಗಾರ ಮಂಜುನಾಥ, ಎಂ. ವಿಶ್ವನಾಥ, ಸುರೇಶ ಬಾರ್ಕಿ, ಕಂಪ್ಲಿ ಹನುಮಂತಪ್ಪ, ಮೇಘನಾಥ, ಎಂ. ಸಣ್ಣಕ್ಕೆಪ್ಪ, ಮಡ್ಡಿ ಹನುಮಂತಪ್ಪ, ಬಾರಿಕೇರ್ ನಾಗರಾಜ, ಸುಭಾಷ್ ಚಂದ್ರ, ಎಸ್.ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT