ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಯಲ್ಲಿ ಯೋಗ ತರಬೇತಿ

ರಾಷ್ಟ್ರೀಯ ಪೋಷಣ್‌ ಮಾಸಾಚರಣೆಯಲ್ಲಿ ಜಿ.ಪಂ ಸಿಇಒ ಹರ್ಷಲ್‌
Last Updated 1 ಸೆಪ್ಟೆಂಬರ್ 2022, 15:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅಂಗನವಾಡಿ ಕೇಂದ್ರಗಳಲ್ಲಿ ಯೋಗ ತರಬೇತಿ ನೀಡುವುದರ ಜೊತೆಗೆ ಪೌಷ್ಟಿಕ ಆಹಾರ ಸೇವನೆಯ ಮಹತ್ವ ತಿಳಿಸಿಕೊಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್‌ ಮಾಸಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುಷ್‌ ಇಲಾಖೆಯಿಂದ ಪ್ರತಿ ಮನೆಗಳಲ್ಲಿ ಯೋಗವನ್ನು ತಿಳಿಸಿಕೊಡಲಾಗುವುದು. ಅದೇ ರೀತಿ ಅಂಗನವಾಡಿಗಳಲ್ಲೂ ತರಬೇತಿ ಕೊಡಲಾಗುವುದು ಎಂದು ಹೇಳಿದರು.

ತಾಯಂದಿರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬಂದಿದ್ದು, ಅದನ್ನು ನಿವಾರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕುಬ್ಜತನ, ಕಡಿಮೆ ತೂಕ ಹೊಂದಿರುವವರನ್ನು ಗುರುತಿಸಿ, ಅಪೌಷ್ಟಿಕತೆ ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ‘ಪೋಷಣ್ ವಾಟಿಕ’ ಹೆಸರಿನಲ್ಲಿ ಕಿಚನ್ ಗಾರ್ಡನ್‍ಗಳನ್ನು ಬೆಳೆಸಲು ಮಹಿಳೆಯರಿಗೆ ತಿಳವಳಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 437 ಅಂಗನವಾಡಿ ಕೇಂದ್ರಗಳ ಕಾಂಪೌಂಡ್‍ಗಳಲ್ಲಿ ಪೌಷ್ಟಿಕ ಕೈತೋಟಗಳನ್ನು ಮಾಡಿಸಲಾಗಿದೆ. ನರೇಗಾ ಯೋಜನೆಯಲ್ಲಿ ಮಹಿಳೆಯರು ಅವರ ಮನೆಗಳಲ್ಲಿ ಕೈತೋಟಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಶಾಲೆಯ ಮಕ್ಕಳಿಗೆ ಪೌಷ್ಟಿಕಾಂಶ, ಶುಚಿತ್ವ, ಕೈತೊಳೆಯುವುದು, ವೈಯಕ್ತಿಕ ನೈರ್ಮಲ್ಯದ ಕುರಿತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಂಬಂಧಿಸಿದ ಶಾಲೆಗಳಿಗೆ ಹೋಗಿ ಶಾಲೆಯ ಶಿಕ್ಷಕರನ್ನು ಒಳಗೊಂಡಂತೆ ಅಲ್ಲಿರುವ ಎಲ್ಲರಿಗೂ ತಿಳಿವಳಿಕೆ ಮೂಡಿಸುವರು ಎಂದು ತಿಳಿಸಿದರು.

ಪೋಷಣ್ ಪಂಚಾಯತಿಗಳಿಂದ ಗರ್ಭಿಣಿ, ಬಾಣಂತಿಯರು ಹಾಗೂ ಪ್ರಾಯ ಪೂರ್ವ ಬಾಲಕಿಯರಿಗೆ ಅಂಗನವಾಡಿ ಕ್ರೇಂದ್ರಗಳಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುವುದು. ತಾಯಂದಿಯರಲ್ಲಿ ಚೈತನ್ಯ ಮೂಡಿಸಲು ‘ಉತ್ತಮ ಮಗು’ ಕಾರ್ಯಕ್ರಮವನ್ನು ಗ್ರಾಮಗಳಲ್ಲಿ ನಡೆಸಿ ಬಹುಮಾನ ವಿತರಿಸಲಾಗುವುದು. ಪ್ರತಿ ತಾಯಂದಿರಿಗೆ ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಉತ್ಸಾಹ ಮೂಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ‌ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹುಲ್ಲೂರು ಹೇಮಲತಾ ಬಸಪ್ಪ ಮಾತನಾಡಿ, ಯಾವುದೇ ಒಂದು ದೇಶದ ಪ್ರಗತಿ, ಶಕ್ತಿಯುತ ರಾಷ್ಟ್ರ ಹಾಗೂ ಆರೋಗ್ಯವಂತ ಸಮಾಜಕ್ಕೆ ಪೌಷ್ಟಿಕಾಂಶ ಆಹಾರ ಸೇವನೆ ಅಗತ್ಯ. ಪೌಷ್ಟಿಕ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

ಪೌಷ್ಟಿಕ ಮೇಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಯಾರಿಸಿದ ತಿನಿಸುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
ಜಾಥಾಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹುಲ್ಲೂರು ಹೇಮಲತಾ ಬಸಪ್ಪ ಚಾಲನೆ ನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ತೃಪ್ತಿ ಧರಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಡಿಡಿಪಿಐ ಜಿ. ಕೊಟ್ರೇಶ್, ಸಿಡಿಪಿಒ ಎಳೆನಾಗಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ ನಾಯ್ಕ್, ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT