ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಅಣ್ಣಂದಿರ ಪಿಂಚಣಿ ಸೇವೆ!

ಮೂರು ತಿಂಗಳ ಪಿಂಚಣಿ ಏಕಕಾಲಕ್ಕೆ ವಿತರಣೆ, ಔಷಧಿ ವಿತರಣೆಗೆ ಹೆಚ್ಚಿನ ಆದ್ಯತೆ
Last Updated 24 ಏಪ್ರಿಲ್ 2020, 5:32 IST
ಅಕ್ಷರ ಗಾತ್ರ

ಬಳ್ಳಾರಿ: ಕೊರೊನಾ ಕಾಲದಲ್ಲಿ ಪಿಂಚಣಿಗಾಗಿ ಎದುರು ನೋಡುತ್ತಿರುವ ಬಡವರ ಪಾಲಿಗೆ ಅಂಚೆ ಅಣ್ಣಂದಿರು ದೇವರಾಗಿದ್ದಾರೆ.

ಕೊರೊನಾ ನಿಯಂತ್ರಣದ ಸಲುವಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ ಕಾಲದಲ್ಲಿ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಗಳ ಮೂರು ತಿಂಗಳ ಪಿಂಚಣಿಯನ್ನು ಏಕಕಾಲಕ್ಕೆ ಬಿಡುಗಡೆ ಮಾಡಿದೆ. ಅದನ್ನು ಬಿರುಬಿಸಿಲಿನಲ್ಲೇ ಅಂಚೆ ಸಿಬ್ಬಂದಿ ಮನೆಬಾಗಿಲಿಗೆ ತಲುಪಿಸುತ್ತಿದ್ದಾರೆ.

‘ಎಲ್ಲವೂ ಬಂದ್‌ ಆಗಿರುವ ಸಂದರ್ಭದಲ್ಲಿ, ಜೀವನೋಪಾಯಕ್ಕಾಗಿ ಲಕ್ಷಾಂತರ ಜನ ಎದುರು ನೋಡುವ ಪಿಂಚಣಿಯನ್ನು ಹಂಚುವ ಮಹತ್ಕಾರ್ಯದಲ್ಲಿ ನಮ್ಮ ಸಿಬ್ಬಂದಿ ತೊಡಗಿದ್ದಾರೆ. ಉಳಿತಾಯ ಖಾತೆ ಹೊಂದಿರುವ ನೂರಾರು ಮಂದಿ ಅಂಚೆ ಶಾಖೆಗಳಿಗೇ ಬಂದು ಪಿಂಚಣಿ ಪಡೆದುಹೋಗುತ್ತಿದ್ದಾರೆ’ ಎಂದು ಅಂಚೆ ಇಲಾಖೆಯ ವಿಭಾಗೀಯ ಅಧೀಕ್ಷಕ ಕೆ.ಮಹಾದೇವಪ್ಪ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

‘ಏಪ್ರಿಲ್‌ 9ರಿಂದ 11ರವರೆಗೂ ಕಚೇರಿಯಲ್ಲಿಯೇ ‘ವಿಂಡೋ ಸೇವೆ’ ನೀಡಲಾಯಿತು. ಸಾರ್ವಜನಿಕರು ಅಂಚೆ ಕಚೇರಿಗೇ ಬಂದು ಔಷಧಿ, ಪತ್ರ, ಮನಿ ಆರ್ಡರ್‌ಗಳನ್ನು ಪಡೆದುಕೊಂಡರು. ಆದರೆ ಅದರಿಂದ ಎಲ್ಲರಿಗೂ ಸೇವೆ ನೀಡಲು ಆಗದೇ ಇದ್ದುದರಿಂದ ಮನೆ ಬಾಗಿಲಿಗೇ ಸೇವೆ ನೀಡುವುದು ಅನಿವಾರ್ಯವಾಯಿತು. ಏಪ್ರಿಲ್‌ 12ರಿಂದ ಸಿಬ್ಬಂದಿ ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಹೇಳಿದರು. ‘ಸದ್ಯ ಅಂಚೆ ಕಚೇರಿಗಳಲ್ಲಿ ಎರಡು ಪ್ರಮುಖ ಸೇವೆಗಳು ದೊರಕುತ್ತಿವೆ. ಪಿಂಚಣಿ ವಿತರಣೆ ಮತ್ತು ಔಷಧಿ ವಿತರಣೆಯ ಸೇವೆಯಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ. ವೈದ್ಯ ಸಿಬ್ಬಂದಿ ಶಂಕಿತ ಸೋಂಕಿತರು ಹಾಗೂ ಸೋಂಕಿತರ ಬಳಿ ಇದ್ದು ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ನಮ್ಮ ಸಿಬ್ಬಂದಿ ಅವರಿಂದ ದೂರದಲ್ಲಿ, ಸಮಾಜದ ನಡುವೆ ಇದ್ದುಕೊಂಡು
ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT