ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಾಚೆ ಮಳಿಗೆ, ಊರೊಳಗೆ ಹಣತೆ...

ಅಬ್ಬರದ ಪಟಾಕಿ ನಡುವೆ ಮಂಕಾಗದ ಹಣತೆಯ ಬೆಳಕು!
Last Updated 4 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಬಳ್ಳಾರಿ: ನಗರ ಮತ್ತೊಂದು ದೀಪಾವಳಿಗೆ ಸಜ್ಜಾಗಿದೆ.

ಹಣತೆಗಳನ್ನು ಬೆಳಗುವ ಮಂದಿಗೆ ತ್ರಾಸ ಕಡಿಮೆ. ಮನೆ ಬಳಿ ಯಾವುದೋ ಒಂದು ಸಣ್ಣ ವೃತ್ತಕ್ಕೆ ಬಂದು ನಿಂತರೂ ವಿವಿಧ ವಿನ್ಯಾಸ ಮತ್ತು ಗಾತ್ರದ ಹಣತೆಗಳು ಸಿಗುತ್ತವೆ. ಅಷ್ಟೇ ಏಕೆ. ಬೆಳಿಗ್ಗೆ, ಸಂಜೆ ಮನೆಯೊಳಗೆ ಕುಳಿತು ರಸ್ತೆಯ ಕಡೆಗೆ ಕಿವಿಗೊಟ್ಟಿದ್ದರೂ ಸಾಕು, ತಳ್ಳುಗಾಡಿಯಲ್ಲಿ ಹಣತೆಯ ರಾಶಿಯೊಂದಿಗೆ ಮಂದಿ ಬಂದಾರು...

ಆದರೆ ಪಟಾಕಿ ಹೊಡೆಯಲೇಬೇಕೆಂಬುವವರು ಊರಾಚೆ ಹೋಗಲೇಬೇಕು. ಜಿಲ್ಲಾ ಕ್ರೀಡಾಂಗಣದವರೆಗಾದರೂ ಸಾಗಲೇ ಬೇಕು. ನಡಿಗೆ, ಆಟೋರಿಕ್ಷಾ, ಸ್ವಂತ ವಾಹನ, ಸಾರಿಗೆ ಬಸ್‌ ಏನಾದರೂ ಸೈ. ಅಲ್ಲಿಗೆ ಹೋದರೆ ಮಾತ್ರ ಪಟಾಕಿ ಖರೀದಿಸಬಹುದು. ಸದ್ದಿಲದ ಬೆಳಕಿಗೆ ಎಲ್ಲಿ ಬೇಕಾದರೂ ಜಾಗವುಂಟು. ಸದ್ದು–ಗದ್ದಲ ಮಾಡುವ ಬೆಳಕಿಗೆ ಊರಾಚೆ ಮಾತ್ರ ಜಾಗ. ಇದು ಸುರಕ್ಷತೆಯ ವಿಷಯವೂ ಹೌದು.

ಇದು ನಗರದಲ್ಲಿ ದೀಪಾವಳಿಯ ಚಿತ್ರಣ.

ಕೆಲವು ವರ್ಷಗಳ ಹಿಂದಿನವರೆಗೂ ಪಟಾಕಿ ಮಳಿಗೆಗಳು ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲೇ ಇರುತ್ತಿದ್ದವು. ಸಾವಿರಾರು ಮಂದಿ ಹಬ್ಬದ ಸಂಭ್ರಮದ ನಡುವೆ ಅಲ್ಲಿಗೇ ಹೋಗಿ ಪಟಾಕಿ ಖರೀದಿಸಿ ಬರುತ್ತಿದ್ದರು.

ಆದರೆ ಈ ಮೈದಾನದ ಸುತ್ತಮುತ್ತ ಶಾಲೆ ಮತ್ತು ಜಿಲ್ಲಾಸ್ಪತ್ರೆ ಇರುವುದರಿಂದ ಅಗ್ನಿ ಅನಾಹುತಗಳು ಸಂಭವಿಸಿದರೆ ನಿಯಂತ್ರಣ ಕಷ್ಟ ಎಂಬ ಕಾರಣಕ್ಕೆ, ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಮಳಿಗೆಗಳನ್ನು ಜಿಲ್ಲಾ ಕ್ರೀಡಾಂಗಣ ಮೈದಾನಕ್ಕೆ ಸ್ಥಳಾಂತರಿಸಿದ್ದರು. ಮೂರು ವರ್ಷದಿಂದ ಮಳಿಗೆಗಳಿಗೆ ಅಲ್ಲೇ ಜಾಗ ಖಾಯಂ ಆಗಿದೆ.

ಜನ ಬರಲ್ಲ ಸಾರ್‌: ಸುರಕ್ಷತೆಗೂ ವ್ಯಾಪಾರಕ್ಕೂ ಹೊಂದಿಕೆಯಾಗುವುದಿಲ್ಲ ಎಂಬುದಕ್ಕೆ ಪಟಾಕಿ ಮಳಿಗೆದಾರರ ಮಾತು ನಿದರ್ಶನವಾಗಿ ಕಾಣುತ್ತದೆ.

‘ಇಷ್ಟು ದೂರ ಬಂದು ಜನ ಪಟಾಕಿ ಖರೀದಿಸಲು ಆಸಕ್ತಿ ತೋರಿಸುವುದಿಲ್ಲ. ರಾತ್ರಿ ವೇಳೆಯಂತೂ ಇಲ್ಲಿಗೆ ಬರಲು ಬಹಳ ಜನ ಭಯ ಪಡುತ್ತಾರೆ. ನಮಗೆ ವ್ಯಾಪಾರವೇ ಆಗುವುದಿಲ್ಲ’ ಎಂದು ವರ್ತಕ ಸೋಮನಾಥ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.

ಅವರೊಂದಿಗೆ 22 ವರ್ತಕರು ಮಳಿಗೆಗಳನ್ನು ಸ್ಥಾಪಿಸುವ ಕೆಲಸದಲ್ಲಿ ನಿರತರಾಗಿದ್ದರು. ಅವರೆಲ್ಲರ ಮಾತು ಒಂದೇ. ಇಷ್ಟು ದೂರದಲ್ಲಿ ಮಳಿಗೆಗಳಿಗೆ ಜಾಗ ಕೊಟ್ಟರೆ ನಾವು ಬದುಕುವುದು ಹೇಗೆ? ‘ಹಿಂದಿನ ವರ್ಷ ಇಲ್ಲಿ ಮಳಿಗೆ ಇಟ್ಟಿದ್ದವರಲ್ಲಿ ಕೆಲವರು ನಷ್ಟ ಹೊಂದಿದರು. ಊರು ಬಿಟ್ಟರು’ ಎಂದು ಸೋಮನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT