ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಭರಿಸಲು ಪೋಷಕರಿಗೆ ಖಾಸಗಿ ಶಾಲೆಗಳ ಒತ್ತಡ

ಖಾಸಗಿ ಶಾಲೆಯವರ ಒತ್ತಡಕ್ಕೆ ಮಕ್ಕಳ ಪೋಷಕರು ಕಂಗಾಲು
Last Updated 11 ಸೆಪ್ಟೆಂಬರ್ 2020, 10:45 IST
ಅಕ್ಷರ ಗಾತ್ರ

ಹೊಸಪೇಟೆ: ತರಗತಿಗಳನ್ನು ನಡೆಸದಿದ್ದರೂ ಶಾಲಾ ಶುಲ್ಕ ಭರಿಸುವಂತೆ ನಗರದ ಕೆಲ ಖಾಸಗಿ ಶಾಲೆಗಳವರು ಪೋಷಕರನ್ನು ಪೀಡಿಸುತ್ತಿರುವುದು ಬೆಳಕಿಗೆ ಬಂದಿದೆ.

ಜೂನ್‌ನಿಂದ ಜಾರಿಗೆ ಬರುವಂತೆ ಪ್ರವೇಶ ಶುಲ್ಕ, ತಿಂಗಳ ಶುಲ್ಕವನ್ನು ಕಡ್ಡಾಯವಾಗಿ ಭರಿಸಬೇಕು. ಇಲ್ಲವಾದಲ್ಲಿ ಅವರ ಪ್ರವೇಶ ರದ್ದುಗೊಳಿಸಲಾಗುವುದು ಎಂದು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕೆಲ ಪೋಷಕರು ಆರೋಪಿಸಿದ್ದಾರೆ.

‘ಲಾಕ್‌ಡೌನ್‌ನಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಸಂದರ್ಭದಲ್ಲಿ ಯಾರಿಂದಲೂ ದುಬಾರಿ ಶುಲ್ಕ ವಸೂಲಿ ಮಾಡಬಾರದು’ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಹೀಗಿದ್ದರೂ ಖಾಸಗಿ ಶಾಲೆಗಳು ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.

ಒಂದರಿಂದ ಆರನೇ ತರಗತಿ ವರೆಗೆ ಪ್ರವೇಶಕ್ಕೆ ₹20,000ರಿಂದ ₹25,000, ಏಳರಿಂದ ಹತ್ತನೇ ತರಗತಿ ವರೆಗೆ ₹35,000ರಿಂದ ₹50,000 ಶುಲ್ಕ ನಿಗದಿಪಡಿಸಲಾಗಿದೆ. ಪ್ರವೇಶದ ಒಟ್ಟು ಶುಲ್ಕ ಈಗ ಭರಿಸಿ, ಜೂನ್‌ನಿಂದ ಸೆಪ್ಟೆಂಬರ್‌ ವರೆಗಿನ ಮಾಸಿಕ ಶುಲ್ಕ ಭರಿಸಬೇಕು ಎಂದು ಶಾಲೆಗಳು ಒತ್ತಡ ಹೇರುತ್ತಿವೆ. ‘ಶಾಲೆಗಳನ್ನೇ ನಡೆಸುತ್ತಿಲ್ಲ. ಶುಲ್ಕ ಪಾವತಿಸುವುದು ಹೇಗೆ?’ ಎನ್ನುವುದು ಪೋಷಕರ ಪ್ರಶ್ನೆಯಾಗಿದೆ.

‘ನನ್ನ ಮಗಳು ಈಗ ಮೂರನೇ ತರಗತಿಗೆ ಬಂದಿದ್ದಾಳೆ. ಜೂನ್‌ನಿಂದ ಇದುವರೆಗೆ ಆಕೆಯ ತರಗತಿಗಳು ನಡೆದಿಲ್ಲ. ಆಗಾಗ ವಾಟ್ಸಾಪ್‌ನಲ್ಲಿ ಹೋಂ ವರ್ಕ್‌ ಹಾಕುತ್ತಾರೆ. ಆದರೆ, ಜೂನ್‌ನಿಂದ ಇದುವರೆಗೆ ಶುಲ್ಕ ಭರಿಸಬೇಕು. ಆನ್‌ಲೈನ್‌ ಕ್ಲಾಸ್‌ಗೆ ಹೆಚ್ಚುವರಿ ಶುಲ್ಕ ಭರಿಸುವಂತೆ ಪೀಡಿಸುತ್ತಿದ್ದಾರೆ. ಒಂದುವೇಳೆ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನಿಮ್ಮ ಮಗಳ ಪ್ರವೇಶ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ಹಾಕುತ್ತಿದ್ದಾರೆ. ನಾಲ್ಕೈದು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಕೂತಿದ್ದೇನೆ. ಶಾಲೆಯವರ ಒತ್ತಡದಿಂದ ಬೇಸತ್ತು ಹೋಗಿದ್ದೇನೆ’ ಎಂದು ರಾಜು ಎನ್ನುವವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ತರಗತಿಗಳೇ ನಡೆದಿಲ್ಲ. ನಾವೇಕೆ ಶುಲ್ಕ ಕಟ್ಟಬೇಕು ಎಂದು ಪ್ರಶ್ನಿಸಿದರೆ, ‘ಶಿಕ್ಷಕರಿಗೆ ಸಂಬಳ ಕೊಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಪಠ್ಯ ಪೂರ್ಣಗೊಳಿಸುತ್ತೇವೆ’ ಎಂದು ಹೇಳುತ್ತಿದ್ದಾರೆ. ನೆಪಕ್ಕಷ್ಟೇ ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿವೆ. ವಾಟ್ಸಾಪ್‌ನಲ್ಲಿ ಹೋಂ ವರ್ಕ್‌ ಕಳಿಸುತ್ತಾರೆ. ಅದನ್ನು ಮನೆಯಲ್ಲಿ ನಾವೇ ಹೇಳಿಕೊಡುತ್ತಿದ್ದೇವೆ’ ಎಂದು ಪ್ರಶಾಂತ್‌ ತಿಳಿಸಿದ್ದಾರೆ.

‘ಶಿಕ್ಷಕರಿಗೆ ಸಂಬಳ ನೀಡಬೇಕು. ಶಾಲೆ ನಡೆಸಿಕೊಂಡು ಹೋಗಬೇಕು. ಹಾಗಾಗಿ ಖಾಸಗಿ ಶಾಲೆಗಳವರು ಶುಲ್ಕ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ ಅವರು ಶಾಲೆಗಳ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT