ಶುಕ್ರವಾರ, ಮೇ 14, 2021
21 °C

ಕೋವಿಡ್-19: ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಲು ಸಿಪಿಐಎಂ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: 'ರಾಜ್ಯದಲ್ಲಿ ಕೂಡಲೇ ಕೋವಿಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು ಹಾಗೂ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಬೇಕು' ಎಂದು ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ್ ಆಗ್ರಹಿಸಿದರು.

'ಕೋವಿಡ್ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಸರ್ವ ಪಕ್ಷಗಳ ಸಭೆಯನ್ನು ಏ.18 ರಂದು ಏರ್ಪಡಿಸಿದ್ದಾರೆ. ಆದರೆ ಸಿಪಿಐಎಂಗೆ ಆಹ್ವಾನ ಇಲ್ಲದಿರುವುದರಿಂದ ಅವರಿಗೆ ಬಹಿರಂಗ ಪತ್ರ ಬರೆದು ಕೋವಿಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದು ಆಗ್ರಹಿಸುತ್ತಿದ್ದೇವೆ' ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಹಾಸಿಗೆ ಸೌಕರ್ಯ ಇಲ್ಲದೆ ನೂರಾರು ಸೋಂಕಿತರು ಆಸ್ಪತ್ರೆಯ ಹೊರಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ' ಎಂದು ಹೇಳಿದರು.

'ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಸಿದ್ಧತೆ ಮತ್ತು ಮುಂಜಾಗ್ರತೆ ವಹಿಸಿಲ್ಲ. ಹೀಗಾಗಿಯೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಹೆಸರಲ್ಲಿ‌ ಜನರನ್ನು ಸುಲಿಗೆ ಮಾಡುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಕೋವಿಡ್ ಮೊದಲ ಲಸಿಕೆ ಪಡೆದವರು ಎರಡನೇ ಲಸಿಕೆ ಪಡೆಯಲು  ಕೊರತೆಯ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಬೇಕು. ಎಲ್ಲಾ ಆಸ್ಪತ್ರೆಗಳ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕು' ಎಂದು ಒತ್ತಾಯಿಸಿದರು‌.

'ಮುಂದಿನ ಆರು ತಿಂಗಳವರೆಗೆ ಕೋವಿಡ್ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೂ ಮಾಸಿಕ ₹ 10 ಸಾವಿರ ನೆರವು ನೀಡಬೇಕು. ತಲಾ 10 ಕೆಜಿ ಧಾನ್ಯ ನೀಡಬೇಕು' ಎಂದು ಆಗ್ರಹಿಸಿದರು.

'ಅಗತ್ಯ ಸೇವೆಗಳನ್ನು ಹೊರತುಪಡಿಸಿ‌ ಉಳಿದ ಎಲ್ಲ‌ ಉತ್ಪಾದಕ ಘಟಕಗಳನ್ನು ಸ್ಥಗಿತಗೊಳಿಸಿ ಕಾರ್ಮಿಕ ರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ‌ ಸರ್ಕಾರವೇ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

'ಕೋವಿಡ್ ಸುರಕ್ಷತೆ ಕ್ರಮಗಳೊಂದಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು. ವೃದ್ಧರು,‌ಒಂಟಿಯಾಗಿ ವಾಸಿಸುವವರನ್ನು ಗುರುತಿಸಿ ನೇರವಾಗಿ ಊಟದ ಪೊಟ್ಟಣಗಳನ್ನು ಪೂರೈಸಬೇಕು' ಎಂದು ಒತ್ತಾಯಿಸಿದರು. ನಗರ ಸಮಿತಿ ಕಾರ್ಯದರ್ಶಿ ಸಿಪಿಐಎಂ ಜಿಲ್ಲಾ ಕಾರ್ಯ ದರ್ಶಿ ಜೆ.ಸತ್ಯಬಾಬು, ನಗರ ಕಾರ್ಯ ದರ್ಶಿ ಚಂದ್ರಕುಮಾರಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು