ಗುರುವಾರ , ಮಾರ್ಚ್ 4, 2021
22 °C
ಸದಾ ಸ್ಮಾರಕಗಳ ಸುತ್ತಮುತ್ತ ಠಿಕಾಣಿ ಹೂಡಿದರೂ ಕೇಳುವವರಿಲ್ಲ; ಪ್ರವಾಸಿಗರಿಗೆ ಕಿರಿಕಿರಿ

ಹಂಪಿ ಸ್ಮಾರಕಗಳಿಗೆ ಬಿಡಾಡಿ ದನಗಳ ಕಾಟ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹಂಪಿ ವಿರೂಪಾಕ್ಷೇಶ್ವರ ದೇಗುಲದ ಆವರಣದ ಮಂಟಪದಲ್ಲಿ ಬಿಡಾಡಿ ದನಗಳ ಕಾರುಬಾರು

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳಿಗೆ ಬಿಡಾಡಿ ದನಗಳ ಕಾಟ ಶುರುವಾಗಿದೆ! ಸ್ಮಾರಕಗಳ ಸುತ್ತಮುತ್ತ ಹಗಲು ರಾತ್ರಿ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿರುವ ಕಾರಣ ಪ್ರವಾಸಿಗರಿಗೆ ಕಿರಿಕಿರಿ ಆಗುತ್ತಿದೆ. ಇದಕ್ಕೆ ಹಂಪಿಯಲ್ಲಿರುವ ದೇವಸ್ಥಾನಗಳು ಹೊರತಾಗಿಲ್ಲ. ಹೀಗಿದ್ದರೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಾಗಲಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯಾಗಲಿ ಯಾವುದೇ ಕ್ರಮ ಜರುಗಿಸಿಲ್ಲ.

ಹಂಪಿ ಸುತ್ತಮುತ್ತಲಿನ ಹಳ್ಳಿಗಳು, ಮಾಗಾಣಿಗಳ ಮಾಲೀಕರು ಕೊಟ್ಟಿಗೆಗಳಲ್ಲಿ ದನಗಳನ್ನು ಕಟ್ಟಿಡುವ ಬದಲು ಹಾಗೆಯೇ ಬಿಟ್ಟಿರುತ್ತಾರೆ. ಅವುಗಳು ಹಂಪಿಯ ಪ್ರಮುಖ ಮಾರ್ಗಗಳು ಹಾಗೂ ಸ್ಮಾರಕಗಳಲ್ಲಿ ಠಿಕಾಣಿ ಹೂಡುತ್ತಿವೆ. ಕೆಲವು ಸ್ಮಾರಕಗಳಿಗೆ ತಂತಿಬೇಲಿ, ಗೇಟ್‌ ಹಾಗೂ ಭದ್ರತಾ ಸಿಬ್ಬಂದಿ ಇರುವುದರಿಂದ ದನಗಳು ಒಳಗೆ ಹೋಗುವುದಿಲ್ಲ. ಕೆಲವೆಡೆ ಯಾವುದೇ ವ್ಯವಸ್ಥೆ ಇಲ್ಲ. ಇದರಿಂದಾಗಿ ದನಗಳು ನೇರವಾಗಿ ಒಳಗೆ ಹೋಗುತ್ತವೆ. ಬೇಕಾಬಿಟ್ಟಿ ಓಡಾಡುತ್ತವೆ. ಅಲ್ಲಿಯೇ ಕುಳಿತುಕೊಳ್ಳುತ್ತವೆ.

ಹಂಪಿಯ ವಿರೂಪಾಕ್ಷೇಶ್ವರ ದೇಗುಲ, ಉದ್ಧಾನ ವೀರಭದ್ರೇಶ್ವರ ದೇವಸ್ಥಾನಗಳಿಗೆ ಪ್ರವಾಸಿಗರು, ಭಕ್ತರು ಭೇಟಿ ಕೊಡುತ್ತಾರೆ. ಈ ಎರಡೂ ದೇಗುಲಗಳಲ್ಲಿ ಸದಾ ಜನದಟ್ಟಣೆ ಇರುತ್ತದೆ. ಹೀಗಿದ್ದರೂ ಬಿಡಾಡಿ ದನಗಳ ಕಾಟ ತಪ್ಪಿಲ್ಲ. ಅದನ್ನು ನಿಯಂತ್ರಿಸಲು ಯಾರೂ ಕ್ರಮ ಕೈಗೊಂಡಿಲ್ಲ. 

ಹಂಪಿ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲೇ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಚೇರಿ ಇದೆ. ಅದರ ಸುತ್ತಮುತ್ತ, ದೇಗುಲದ ಆವರಣದಲ್ಲಿರುವ ಮಂಟಪಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ದನಗಳು ಹಿಂಡು ಹಿಂಡಾಗಿ ಓಡಾಡಿಕೊಂಡು ಇರುತ್ತವೆ. ಅಲ್ಲದೇ ಸದಾ ಮಂಗಗಳ ಗುಂಪು ಕೂಡ ಅಲ್ಲಿ ಬೀಡು ಬಿಟ್ಟಿರುತ್ತವೆ. ಪ್ರವಾಸಿಗರ ಕೈಗಳಲ್ಲಿ ಯಾವುದಾದರೂ ವಸ್ತು ಕಂಡರೆ ಮೂಗಿ ಬೀಳುತ್ತವೆ. ಅವುಗಳಿಗೆ ಕಡಿವಾಣ ಹಾಕಿ, ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಾಗರಿಕರು, ಹಂಪಿ ಮಾರ್ಗದರ್ಶಿಗಳು.

‘ಹಂಪಿ ಅಂತಿಂಥಹ ಸ್ಥಳವಲ್ಲ. ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಸ್ಥಳ. ದೇಶ–ವಿದೇಶಗಳಿಂದ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬಿಡಾಡಿ ದನಗಳು ಸ್ಮಾರಕಗಳ ಸುತ್ತ ಬೇಕಾಬಿಟ್ಟಿ ಓಡಾಡದಂತೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ’ ಹಂಪಿ ಮಾರ್ಗದರ್ಶಿ ಗೋಪಾಲ್‌.

‘ಇತ್ತೀಚೆಗೆ ಹೊಸಪೇಟೆ, ಕಮಲಾಪುರ ಪಟ್ಟಣಗಳಲ್ಲಿ ಬಿಡಾಡಿ ದನಗಳನ್ನು ಸ್ಥಳೀಯ ಆಡಳಿತದಿಂದ ವಶಕ್ಕೆ ಪಡೆದು ಗೋ ಶಾಲೆಗಳಿಗೆ ಸಾಗಿಸಲಾಗಿದೆ. ದನಗಳ ಮಾಲೀಕರಿಗೆ ಎಚ್ಚರ ಕೂಡ ಕೊಡಲಾಗಿದೆ. ಅದೇ ರೀತಿ ಹಂಪಿಯಲ್ಲೂ ಮಾಡಬೇಕು’ ಎಂದರು.

‘ಇಡೀ ಹಂಪಿಯಲ್ಲೇ ವಿರೂಪಾಕ್ಷೇಶ್ವರ ದೇಗುಲ ಅತ್ಯಂತ ಪವಿತ್ರ ಸ್ಥಳವೆಂದು ಭಾವಿಸಲಾಗುತ್ತದೆ. ನೂರಾರು ಜನ ನಿತ್ಯ ದರ್ಶನಕ್ಕೆ ಬರುತ್ತಾರೆ. ಜನರ ಮಧ್ಯೆಯೇ ಬಿಡಾಡಿ ದನಗಳು ತೂರಿಕೊಂಡು ಒಳಗೆ ಹೋಗುತ್ತವೆ. ಅದನ್ನು ತಡೆಯಬೇಕು. ಅವುಗಳ ಮಾಲೀಕರಿಗೆ ಎಚ್ಚರ ಕೊಡಬೇಕು’ ಎನ್ನುತ್ತಾರೆ ಹಂಪಿ ನಿವಾಸಿ ರಾಜು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು