ಭಾನುವಾರ, ಆಗಸ್ಟ್ 18, 2019
24 °C
ಜಿಲ್ಲಾಮಟ್ಟದ ಪ್ರೊಕಬಡ್ಡಿ: ಎಚ್‌ಬಿಹಳ್ಳಿಯ ಪುರುಷೋತ್ತಮ ಶ್ರೇಷ್ಠ ಆಟಗಾರ

ಚೊಚ್ಚಲ ಟೂರ್ನಿಗೆ ಕಿಲ್ಲಿಂಗ್‌ ಟೈಗರ್ಸ್‌ ಚಾಂಪಿಯನ್‌

Published:
Updated:
Prajavani

ಬಳ್ಳಾರಿ: ರೋಚಕ ಮುಕ್ತಾಯ ಕಂಡ ಜಿಲ್ಲಾ ಮಟ್ಟದ ಚೊಚ್ಚಲ ಪ್ರೊಕಬಡ್ಡಿ ಟೂರ್ನಿಯಲ್ಲಿ ಕೊಟ್ಟೂರಿನ ಕಿಲ್ಲಿಂಗ್‌ ಟೈಗರ್ಸ್‌ ತಂಡ ಚಾಂಪಿಯನ್‌ ಆಯಿತು. 

ನಗರದ ಗಾಂಧೀಭವನದಲ್ಲಿ ಸೋಮವಾರ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಕಿಲ್ಲಿಂಗ್ ಟೈಗರ್ಸ್‌ ತಂಡವು 32–23 ಅಂಕಗಳಿಂದ ದಬಾಂಗ್‌ ಎಚ್‌ಬಿಹಳ್ಳಿ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟದೊಂದಿಗೆ ₨ 70 ಸಾವಿರ ನಗದು ಬಹುಮಾನವನ್ನು ಪಡೆದು ಬೀಗಿತು. 

ಕಿಲ್ಲಿಂಗ್‌ ಟೈಗರ್ಸ್‌  ತಂಡದ ಮೆಹಬೂಬ್‌ ಪಾಷಾ ಬೆಸ್ಟ್‌ ರೈಡರ್‌ ಆಗಿ, ತಿಪ್ಪೇಸ್ವಾಮಿ ಬೆಸ್ಟ್‌ ಕ್ಯಾಚರ್‌ ಆಗಿ ಹೊರಹೊಮ್ಮಿದ್ದು ಮತ್ತೊಂದು ವಿಶೇಷ.

ರನ್ನರ್ಸ್‌ ಅಪ್‌ ಸ್ಥಾನ ಪಡೆದ ಎಚ್‌ಬಿಹಳ್ಳಿ ತಂಡಕ್ಕೆ ₨50 ಸಾವಿರ ನಗದು ಬಹುಮಾನ ದೊರಕಿತು. ಈ ತಂಡ ಮೊದಲ ಸ್ಥಾನ ಪಡೆಯಲು ಆಗದ ನಿರಾಶೆಯ ನಡುವೆಯೂ, ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದ ಪುರುಷೋತ್ತಮ ತಂಡಕ್ಕೆ ಹೆಮ್ಮೆ ತಂದರು.

ಸೆಮಿಫೈನಲ್‌ಗೆ ಆಯ್ಕೆಯಾಗಿದ್ದ ನಾಲ್ಕು ತಂಡಗಳ ಕಂಪ್ಲಿ ವಾರಿಯರ್ಸ್‌ ಹಾಗೂ ಕೂಡ್ಲಿಗಿ ಟೈಗರ್ಸ್‌ ತಂಡ ನಿರಾಶೆ ಕಂಡಿದ್ದವು. ಈ ತಂಡಗಳ  ನಡುವೆ ನಡೆದ ಹಣಾಹಣಿಯಲ್ಲಿ ಕಂಪ್ಲಿ 28–26 ಅಂಕಗಳ ಗೆಲುವು ಸಾಧಿಸಿ ಮೂರನೇ ಸ್ಥಾನ ಪಡೆಯಿತು. ಈ ತಂಡಕ್ಕೆ ₨ 30 ಸಾವಿರ ನಗದು ಬಹುಮಾನ ಲಭಿಸಿತು. ಕೂಡ್ಲಿಗಿ ತಂಡ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತಿ. ಈ ತಂಡಕ್ಕೆ ₨ 20 ಸಾವಿರ ನಗದು ಬಹುಮಾನ ಲಭಿಸಿತು. 

ಬಳ್ಳಾರಿ ಜಿಲ್ಲಾ ಕಬಡ್ಡಿ ಪ್ರಮೋಟರ್ಸ್‌ ಸಂಸ್ಥೆಯು ಏರ್ಪಡಿಸಿದ್ದ ಪ್ರೊಕಬಡ್ಡಿ ಲೀಗ್‌ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದವು. ಕೊನೇ ದಿನವಾದ ಸೋಮವಾರ ಬೆಳಿಗ್ಗೆ ಮೂರು ಮತ್ತು ಸಂಜೆ ನಾಲ್ಕು ಪಂದ್ಯಗಳುನಡೆದವು.  

ಸಂಸ್ಥೆಯ ಪ್ರಮುಖರಾದ ಕೆ.ವಿ.ಮುತ್ತೇಗೌಡ, ಕೆ.ಟಿ.ಬಸಪ್ಪ, ಕೆ.ಷಣ್ಮುಖ, ಎನ್‌.ಎಚ್.ರಮೇಶ್‌ ಮತ್ತು ಪಂಪಾಪತಿ ಉಪಸ್ಥಿತರಿದ್ದರು. 

Post Comments (+)