ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ’

ಸರ್ವಜನರ ಸಂವಿಧಾನ ಸಮಾವೇಶದಲ್ಲಿ ಉಗ್ರಪ್ಪ ಅಭಿಮತ
Last Updated 25 ಅಕ್ಟೋಬರ್ 2019, 12:54 IST
ಅಕ್ಷರ ಗಾತ್ರ

ಬಳ್ಳಾರಿ: ‘ಸರ್ವರಿಗೂ ಸಮಪಾಲು, ಸಮಬಾಳು, ಜಾತಿರಹಿತ ಸಮಸಮಾಜದ ನಿರ್ಮಾಣಕ್ಕಾಗಿ ಸಂವಿಧಾನವನ್ನು ರಚಿಸಲಾಗಿದೆ. ಆದರೆ ಶ್ರೇಣಿಕೃತ ಜಾತಿ ವ್ಯವಸ್ಥೆಯ ಪ್ರತಿಪಾದಕರೇ ಸಂವಿಧಾನದ ವಿರೋಧಿಗಳಿದ್ದಾರೆ. ಸಂವಿಧಾನದ ರಕ್ಷಣೆಗಾಗಿ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ’ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟರು..

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯು ಶುಕ್ರವಾರ ಹಮ್ಮಿಕೊಂಡಿದ್ದ ಸರ್ವ ಜನರ ಸಂವಿಧಾನ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಈಡೇರಿಲ್ಲ. ‘ಸಂವಿಧಾನವನ್ನು ವಿರೋಧಿಸುವವರಿಂದಲೇ ಅಂಬೇಡ್ಕರ್ ಆಶಯಗಳಿಗೆ ಧಕ್ಕೆ ತಂದಿದೆ. ಜನರಲ್ಲಿರುವ ಸಂಕುಚಿತ ಭಾವವನ್ನು ತೊಡೆದು, ನಾವು ಎಚ್ಚತ್ತುಕೊಳ್ಳದಿದ್ದರೆ ಸಂವಿಧಾನಕ್ಕೆ ದುರುಳರು ಅಪಚಾರ ಎಸಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಂವಿಧಾನದ ಹಕ್ಕುಗಳು ಪರಿಶಿಷ್ಟರಿಗೆ ಮಾತ್ರ ಅಲ್ಲ. ಎಲ್ಲರಿಗೂ ಅನ್ವಯಿಸುತ್ತವೆ. ಅಂಬೇಡ್ಕರ್ ಒಂದು ಜಾತಿ ಮತ್ತು ವರ್ಗಕ್ಕೆ ಸೀಮಿತವಾದವರಲ್ಲ. ಜಾತಿಗೊಂದೊಂದು ಬಣ್ಣದ ರಕ್ತವಿಲ್ಲ. ಎಲ್ಲರಿಗೂ ಒಂದೇ ಬಣ್ಣದ ರಕ್ತವಿದೆ. ಎಲ್ಲಿವರೆಗೆ ನಾವೆಲ್ಲರೂ ಅಂಬೇಡ್ಕರ್ ಕುಟುಂಬದವರು ಎಂದು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿವರೆಗೆ ಸಮಾನತೆ ಸಾಧ್ಯವಿಲ್ಲ’ ಎಂದರು.

‘ಲಾಠಿ ಹಿಡಿದರೆ ಸಂವಿಧಾನ ಬದಲಾಗಲಿಲ್ಲ. ಚಡ್ಡಿಯಿಂದ ಪ್ಯಾಂಟ್ ಬಂದರೂ ಅವರ ಬುದ್ದಿ ಬದಲಾಗಲಿಲ್ಲ’ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್‌ ಸಂಘಟಕರನ್ನು ಟೀಕಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಪರಿಶಿಷ್ಟ ಪಂಗಡದವರಿಗೆ ಶೇ.7.5 ಮೀಸಲಾತಿ ಕೊಡಿಸುವುದಾಗಿ ಹೇಳಿದ್ದ ಬಳ್ಳಾರಿಯ ಸ್ವಾಭಿಮಾನಿ ನಾಯಕರೊಬ್ಬರು ಈಗ ಎಲ್ಲಿದ್ದಾರೊ?’ ಎಂದು ಪರೋಕ್ಷವಾಗಿ ಶ್ರೀರಾಮುಲು ಅವರನ್ನು ಕುಟುಕಿದರು.

‘ರಾಜ್ಯದಲ್ಲಿ ಪ್ರವಾಹ ಇದೆ‌. ಪ್ರಧಾನಿ ಮಾತ್ರ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಉಡಾಫೆ ಮಾತಾಡುತ್ತಾರೆ. ಕೇವಲ ₨ 1200 ಕೋಟಿ ಪರಿಹಾರವನ್ನು ಭಿಕ್ಷೆಯೆಂಬಂತೆ ಕೊಟ್ಟಿದ್ದಾರೆ. ಕೂಡಲೇ ₨ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ನಾವೂ ಈ ದೇಶದಲ್ಲಿದ್ದು ತೆರಿಗೆ ಪಾವತಿಸುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು.

ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ‘ಜನರನ್ನು ಗುಂಪಾಗಿ ಹಿಂಸಿಸುವುದು ಪಾಶ್ಚಾತ್ಯ ಸಂಸ್ಕೃತಿ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ, ದೇಶದ ಹಲವೆಡೆ ನಡೆಯುತ್ತಿರುವ ದಲಿತರ ಹತ್ಯೆಗಳು ಏನನ್ನು ಸೂಚಿಸುತ್ತವೆ’ ಎಂದು ಪ್ರಶ್ನಿಸಿದರು.

‘ಧರ್ಮದ ಹೆಸರಿನಲ್ಲಿ, ರಾಷ್ಟ್ರೀಯತೆಯ ಮಂಕು ಬೂದಿ ಎರಚಿ ದಲಿತರ ಹತ್ಯೆಗಳನ್ನು ನಡೆಸಲಾಗುತ್ತಿದೆ. ರಾಷ್ಟ್ರವಾದದ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಬಡಿದೆಬ್ಬಿಸುವ ಹುನ್ನಾರಗಳು ಬಲಿಷ್ಠಗೊಳ್ಳುತ್ತಿವೆ. ಜನರು ಎಚ್ಚೆತ್ತುಕೊಳ್ಳಬೇಕು’ ಎಂದರು..

‘ದಲಿತ, ಅಲ್ಪಸಂಖ್ಯಾತ ವರ್ಗಗಳು ಒಂದಾಗಿ ದೇಶದ ರಾಜಕೀಯಅಧಿಕಾರವನ್ನುಪಡೆಯಬೇಕು. ಆದರೆ, ದಲಿತರು ಬಲಾಢ್ಯರ ಕೈಗೊಂಬೆಗಳಾಗಿದ್ದಾರೆ. ಶೋಷಿತ ಸಮುದಾಯಗಳನ್ನು ಸರಿಯಾದ ದಿಕ್ಕಿನಡೆಗೆ ಕರೆದೊಯ್ಯಬೇಕಾಗಿದೆ’ ಎಂದರು.

ಪ್ರೊ. ಬಿ.ಶ್ರೀನಿವಾಸ ಮೂರ್ತಿ ಉಪನ್ಯಾಸ ನೀಡಿದರು. ಜಿಲ್ಲಾ ಪ್ರಧಾನ ಸಂಚಾಲಕ ಎಚ್.ಹುಸೇನಪ್ಪ, ಸಮಿತಿಯ ದುರುಗಪ್ಪ ತಳವಾರ, ನಾಗಣ್ಣ, ಖಾಜಿ ಮಹಮದ್ ಸಿದ್ದಿಕಿ, ಕಲ್ಲುಕಂಬ ಪಂಪಾಪತಿ, ಅರ್ಜುನ್ ಗಬ್ಬೂರು, ಮಾಳಮ್ಮ, ವಿಶಾಲಾಕ್ಷಮ್ಮ, ಎಚ್.ತಿಪ್ಪೇಸ್ವಾಮಿ, ದುರುಗಪ್ಪ, ಚಿದಾನಂದಪ್ಪ, ವೀರೇಶ, ಚಿಕ್ಕಗಾದಿಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT