ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನೇಷನ್‌ ಹಾವಳಿ ತಡೆಗೆ ಆಗ್ರಹಿಸಿ ಪ್ರತಿಭಟನೆ

Last Updated 25 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಶಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಡೊನೇಷನ್‌ ಹಾವಳಿ ತಡೆಯುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿ.ವೈ.ಎಫ್‌.ಐ.) ಕಾರ್ಯಕರ್ತರು ಗುರುವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಪ್ಲೇ ಕ್ಲಾಸ್‌, ಎಲ್‌.ಕೆ.ಜಿ., ಯು.ಕೆ.ಜಿ. ಮತ್ತು ಒಂದನೇ ತರಗತಿಯ ಮಕ್ಕಳಿಗೆ ಶಾಲೆಗೆ ಸೇರಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಪೋಷಕರಿಂದ ₹5ರಿಂದ ₹35 ಸಾವಿರದ ವರೆಗೆ ಡೊನೇಷನ್‌ ಪಡೆಯುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳಂತೂ ಅದರ ರಸೀದಿ ಸಹ ಕೊಡುತ್ತಿಲ್ಲ. ಬೋಧನಾ ಶುಲ್ಕ, ಬಸ್‌, ಮಕ್ಕಳ ಬಟ್ಟೆ, ಪುಸ್ತಕಕ್ಕೆ ಪ್ರತ್ಯೇಕವಾಗಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಇದು ಹಗಲು ದರೋಡೆಯಲ್ಲದೇ ಮತ್ತೇನಲ್ಲ. ಇದರಲ್ಲಿ ಅಪ್ರತ್ಯಕ್ಷವಾಗಿ ಶಿಕ್ಷಣ ಸಂಸ್ಥೆಯ ಅಧಿಕಾರಿಗಳ ಕೈವಾಡ ಇರುವುದರ ಬಗ್ಗೆ ಸಂಶಯ ಮೂಡುತ್ತಿದೆ’ ಎಂದು ಡಿ.ವೈ.ಎಫ್‌.ಐ. ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಗಂಭೀರ ಆರೋಪ ಮಾಡಿದರು.

‘ನಮ್ಮ ಸಂಘಟನೆಯ ವತಿಯಿಂದ ಅನೇಕ ವರ್ಷಗಳಿಂದ ಡೊನೇಷನ್‌ ಹಾವಳಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆದರೆ, ಅಧಿಕಾರಿಗಳು ಮಾತ್ರ ಮೌನ ಜಾಣ ವಹಿಸಿದ್ದಾರೆ. ಇದೇ ಧೋರಣೆ ಮುಂದುವರೆಸಿದಲ್ಲಿ ಬಿ.ಒ. ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಎಲ್ಲ ಶಾಲೆಗಳಲ್ಲಿ ಡೊನೇಷನ್‌ ವಿರೋಧಿ ಸಮಿತಿ ರಚಿಸಬೇಕು. ಶಾಲೆಗಳ ಮುಂದೆ ಬೋಧನಾ ಶುಲ್ಕ, ಅಭಿವೃದ್ಧಿ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕ ಮತ್ತು ಬಂಡವಾಳ ವೆಚ್ಚದ ವಿವರ ಸೂಚನಾ ಫಲಕದಲ್ಲಿ ಹಾಕಬೇಕು. ಬಿ.ಒ. ಕಚೇರಿಯಿಂದ ಡೊನೇಷನ್‌ ವಿರೋಧಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕಿನ್ನಾಳ್‌ ಹನುಮಂತ, ಕಾರ್ಯದರ್ಶಿ ಕಲ್ಯಾಣಯ್ಯ, ಮುಖಂಡರಾದ ಇ. ಮಂಜುನಾಥ, ಬಂಡೆ ತಿರುಕಪ್ಪ, ಕೆ.ಎಂ. ಸಂತೋಷ್‌ ಕುಮಾರ್‌, ವಿಜಯಕುಮಾರ್‌, ರಾಜಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT