ಕೇಂದ್ರದ ವಿರುದ್ಧ ಕಾರ್ಮಿಕರ ಗುಡುಗು

7
ಶಕ್ತಿ ಪ್ರದರ್ಶನದ ಮೂಲಕ ಮೋದಿ ಸರ್ಕಾರಕ್ಕೆ ಎಚ್ಚರಿಕೆ; ಜೈಲ್‌ ಭರೋ ಚಳವಳಿ

ಕೇಂದ್ರದ ವಿರುದ್ಧ ಕಾರ್ಮಿಕರ ಗುಡುಗು

Published:
Updated:
Deccan Herald

ಹೊಸಪೇಟೆ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜೈಲ್‌ ಭರೋ ಚಳವಳಿ ನಡೆಸಿದರು.

ಕಾರ್ಮಿಕರ, ರೈತರ ಮತ್ತು ಕೃಷಿ ಕೂಲಿಕಾರರ ಜಂಟಿ ಹೋರಾಟ ಸಮಿತಿ, ದಲಿತ ಹಕ್ಕುಗಳ ಸಮಿತಿ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿ.ಐ.ಟಿ.ಯು.), ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತರು ನಗರದ ಶ್ರಮಿಕ ಭವನದಂದ ರೋಟರಿ ವೃತ್ತದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ರ್‍ಯಾಲಿಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ವೃತ್ತದಲ್ಲಿ ಅರ್ಧ ಗಂಟೆಯ ವರೆಗೆ ರಸ್ತೆತಡೆ ಚಳವಳಿ ನಡೆಸಿದರು. ಬಳಿಕ ಪೊಲೀಸರು ಎಲ್ಲ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿ.ಐ.ಟಿ.ಯು. ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ, ‘ಸ್ವಾಮಿನಾಥನ್‌ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ ಅನೇಕ ವರ್ಷಗಳೇ ಆಗಿವೆ. ಹೀಗಿದ್ದರೂ ಸರ್ಕಾರ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದೆ. ವರದಿ ಜಾರಿಗೆ ಬಂದರೆ ರೈತರು ಅಭಿವೃದ್ಧಿ ಹೊಂದುತ್ತಾರೆ. ಆದರೆ, ಕೇಂದ್ರ ಸರ್ಕಾರಕ್ಕೆ ಅದು ಬೇಕಾಗಿಲ್ಲ. ಕಾರ್ಪೊರೇಟ್‌ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ರೈತರನ್ನು ಸಾಯಿಸಲು ಹೊರಟಿದೆ’ ಎಂದು ಆರೋಪಿಸಿದರು.

‘ಕೃಷಿ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಲಾಭ ನಿಗದಿಪಡಿಸುವ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು. ಕೇರಳದ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ತರಬೇಕು. ಬೆಳೆ ವಿಮೇ ಯೋಜನೆ ರೈತಸ್ನೇಹಿ ಮಾಡಲು ಕ್ರಮ ಜರುಗಿಸಬೇಕು. ಕಾರ್ಮಿಕರು, ರೈತರಿಗೆ ಮಾಸಿಕ ₨5 ಸಾವಿರ ಮಾಸಾಶನ ಕೊಡಬೇಕು. ಕಾರ್ಮಿಕ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು’ ಎಂದು ಆಗ್ರಹಿಸಿದರು.

ನಂತರ ಗ್ರೇಡ್‌–2 ತಹಶೀಲ್ದಾರ್‌ ರೇಣುಕಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ತಾಯಪ್ಪ ನಾಯಕ, ಮರಡಿ ಜಂಬಯ್ಯ ನಾಯಕ, ಯಲ್ಲಾಲಿಂಗ, ರಮೇಶ್‌, ಬಿಸಾಟಿ ಮಹೇಶ್‌, ಕಲ್ಯಾಣಯ್ಯ, ಕೆ.ಎಂ. ಸಂತೋಷ್‌ ಕುಮಾರ್‌, ನಾಗರತ್ನ, ಗೋಪಾಲ್‌, ಎಸ್‌. ಸತ್ಯಮೂರ್ತಿ, ಬಿ. ರಮೇಶ್‌ ಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !