ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಘಟಕದ ಮುಂದೆ ನೌಕರರ ಪ್ರತಿಭಟನೆ

ಸಾರಿಗೆ ನಿಗಮಗಳ ಒಗ್ಗೂಡಿಸಲು ಆಗ್ರಹ
Last Updated 6 ಅಕ್ಟೋಬರ್ 2018, 14:12 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನು ಒಗ್ಗೂಡಿಸಿ ಒಂದೇ ನಿಗಮವನ್ನು ರಚಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದುಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ಸದಸ್ಯರು ಶನಿವಾರ ಇಲ್ಲಿನ ಈಶಾನ್ಯ ವಲಯದ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಿದರು.

‘ಸಿಬ್ಬಂದಿ ಅನುಪಾತವನ್ನು ಹೆಚ್ಚಿಸಿ ಕಾರ್ಮಿಕರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು. ಅಂತರ ನಿಗಮ ವರ್ಗಾವಣೆ ಆಗಿರುವ ಕಾರ್ಮಿಕರನ್ನು ಕೂಡಲೇ ಕಾರ್ಯ ವಿಮುಕ್ತಿಗೊಳಿಸಬೇಕು. ಬಿಎಂಟಿಸಿ ಮತ್ತು ವಾಯುವ್ಯ ನಿಗಮ ಸಿಬ್ಬಂದಿಗಳ ಬಾಕಿ ವೇತನ ಹಾಗೂ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಬೇಕು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎ.ಆದಿಮೂರ್ತಿ ಆಗ್ರಹಿಸಿದರು.

‘ಪ್ರಯಾಣಿಕರು ಟಿಕೆಟ್ ಕಳೆದುಕೊಂಡಿರುವ ಸಂದರ್ಭದಲ್ಲಿ ನಿರ್ವಾಹಕರನ್ನು ದೋಷಿಗಳನ್ನಾಗಿಸುವುದು ನಿಲ್ಲಬೇಕು. ನಿಗಮಗಳು ಸಾಮಾಜಿಕ ಹೊಣೆಗಾರಿಕೆಗೆ ಖರ್ಚು ಮಾಡುತ್ತಿರುವ ಹಣವನ್ನು ರಾಜ್ಯ ಸರ್ಕಾರ ಹಿಂದಿರುಗಿಸಬೇಕು’ ಎಂದು ಒತ್ತಾಯಿಸಿದರು.

‘ಈಶಾನ್ಯ ಸಾರಿಗೆ ನಿಗಮಕ್ಕೆ ಪೂರ್ಣಕಾಲದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿ, ಕಾರ್ಮಿಕ ಸಂಘದ ಮಾನ್ಯತೆಗೆ 1991ರ ನಿಯಮದಂತೆ ಚುನಾವಣೆ ನಡೆಸಬೇಕು. 2016ರ ಮುಷ್ಕರಕ್ಕೆ ಸಂಬಂಧಿಸಿ ಸಂಘದ ಪದಾಧಿಕಾರಿಗಳ ವಿರುದ್ಧ ಜಾರಿಗೊಳಿಸಿರುವ ಆರೋಪಪಟ್ಟಿ ಮತ್ತು ಪ್ರಕರಣಗಳನ್ನು ಹಿಂಪಡೆಯಬೇಕು. 1998ರ ಏಪ್ರಿಲ್ 1ರ ನಂತರ ನೇಮಕವಾಗಿರುವ ಕಾರ್ಮಿಕರ ಭವಿಷ್ಯನಿಧಿಯನ್ನು ಭವಿಷ್ಯನಿಧಿ ಆಯುಕ್ತರ ಕಚೇರಿಯಿಂದ ಹಿಂಪಡೆದು ನಿಗಮದ ಭವಿಷ್ಯನಿಧಿ ನ್ಯಾಸ ಮಂಡಳಿಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

‘ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಚಾಲಕರಿಗೆ ದೈನಂದಿನ ಕರ್ತವ್ಯಕ್ಕೆ ನಿಯೋಜಿಸದಿದ್ದಲ್ಲಿ ಹಾಜರಾತಿ ನೀಡಬೇಕು, ಹೊಸಪೇಟೆ ವಿಭಾಗ ನಿಯಂತ್ರಣಾಧಿಕಾರಿ ಜೆ.ಎಂ.ಫೈಯಾಜ್‌ ಅವರನ್ನು ಅಮಾನತ್ತುಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಘಟಕದ ಉಪಾಧ್ಯಕ್ಷ ಟಿ.ಚೆನ್ನಪ್ಪ, ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿಮಠ, ಎಂ.ಡಿ.ಗೌಸ್, ಎಚ್.ಶಶಿಕಿರಣ್, ಅಯೂಬ್‌ಖಾನ್, ಹನುಮಾನಾಯ್ಕ, ಕೆ.ರಮೇಶ್, ಜಿ.ಶಿವಕುಮಾರ ಕೆ.ಖಾದೀರ್ ಬಾಷಾ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT