ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ದೇವದಾಸಿ ಮಕ್ಕಳಿಗೂ ಪ್ರೋತ್ಸಾಹಧನ: ಆಗ್ರಹ

Last Updated 3 ಆಗಸ್ಟ್ 2019, 12:35 IST
ಅಕ್ಷರ ಗಾತ್ರ

ಬಳ್ಳಾರಿ: "ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ರೋತ್ಸಾಹ ಧನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬದವರಿಗೆ ಮಾತ್ರ ನೀಡುವ ನಿರ್ಧಾರ ಖಂಡನೀಯ’ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಯು.ಬಸವರಾಜ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ಜಾತಿಗಳ ದೇವದಾಸಿ ಮಹಿಳೆಯರಿಗೆ ಪ್ರೋತ್ಸಾಹಧನ ನೀಡದಿದ್ದರೆ ತಾರತಮ್ಯ ಮಾಡಿದಂತಾಗುತ್ತದೆ. ಕುಟುಂಬಗಳ ಸದಸ್ಯರ ನಡುವೆ ಮದುವೆಯಾದರೆ ಪ್ರೋತ್ಸಹಧನವಿಲ್ಲ ಎಂಬ ನಿಯಮ ರೂಪಿಸಿ ವಂಚಿಸಲಾಗಿದೆ. ಇಂಥವರನ್ನೇ ಮದುವೆಯಾಗಬೇಕು ಎಂದು ಸರ್ಕಾರ ಯಾರಿಗೂ ಹೇಳಬಾರದು’ ಎಂದು ಆಗ್ರಹಿಸಿದರು.

‘ಎಲ್ಲಾ ದೇವದಾಸಿಯರ ಮಕ್ಕಳ ಮದುವೆಗೆ ಪ್ರೋತ್ಸಾಹಧನ ನೀಡಬೇಕು. ಹೆಚ್ಚಿಸಬೇಕು. ಅದಕ್ಕೆ ಅಡ್ಡಿಯಾಗಿರುವ ನಿಯಮ ಮತ್ತು ಸೂಚನೆಗಳನ್ನು ಹಿಂಪಡೆಯಬೇಕು. ಪದೇ ಪದೇ ಅರ್ಜಿ ಕರೆಯುವ ಪರಿಪಾಠವನ್ನು ಬಿಟ್ಟು, ಸರ್ಕಾರದ ಬಳಿ ಇರುವ ದೇವದಾಸಿಯ ಪಟ್ಟಿಯನ್ವಯ ಸೌಲಭ್ಯಗಳನ್ನು ನೀಡಬೇಕು. ಅದರಿಂದ ಹಣ, ಸಮಯ ವ್ಯರ್ಥವಾಗುವುದು ತಪ್ಪುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನೂ ತಡೆಗಟ್ಟಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ‘ಜಿಂದಾಲ್ ಕಂಪೆನಿಗೆ ಸಾವಿರಾರು ಎಕರೆ ಜಮೀನು ಕೊಡಲು ಮುಂದಾಗಿರುವ ರಾಜ್ಯ ಸರ್ಕಾರ ದೇವದಾಸಿಯರಿಗೆ ಭೂಮಿ ನೀಡುತ್ತಿಲ್ಲ. ದೇವದಾಸಿಯರ ಗಣತಿ ಮಾಡಿ ಸೂಕ್ತ ಸೌಲಭ್ಯ ಮತ್ತು ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣ ಸೌಲಭ್ಯಗಳನ್ನು ಒದಗಿಸಬೇಕು. ಖಾಲಿ ಸ್ಥಳ ಇರುವ ಕಡೆ ಜಾಗ ಗುರುತಿಸಿ ದೇವದಾಸಿಯರಿಗೆ ನಿವೇಶನ ನೀಡಿ, ₨ 5ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ 11 ಸಾವಿರ ಮಾಜಿ ದೇವದಾಸಿಯರಿದ್ದಾರೆ. 25 ಸಾವಿರ ಮಂದಿ ಅವರನ್ನು ಅವಲಂಬಿಸಿದ್ದಾರೆ. ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಪ್ಟೆಂಬರ್ 16, 17, 18 ರಂದು ಮೂರು ದಿನಗಳ ಕಾಲ ರಾಜ್ಯದಾದ್ಯಂತ ಎಲ್ಲಾ ತಾಲ್ಲೂಕಿ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ನಾಗರತ್ನಮ್ಮ, ಕಾರ್ಯದರ್ಶಿ ಎ.ಸ್ವಾಮಿ, ಯಂಕಮ್ಮ, ಯಲ್ಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT