ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಪ್ರವಾಹದಿಂದ ಮನೆ ಹಾನಿ, 2 ದಿನದೊಳಗೆ ಪರಿಹಾರ ನೀಡಲು ಸೂಚನೆ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
Last Updated 19 ಆಗಸ್ಟ್ 2019, 9:49 IST
ಅಕ್ಷರ ಗಾತ್ರ

ಬಳ್ಳಾರಿ: 'ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಎರಡು ದಿನದೊಳಗೆ ಪರಿಹಾರ ವಿತರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವಗುಪ್ತಾ ಸೂಚಿಸಿದರು.

ನಗರದಲ್ಲಿ ಸೋಮವಾರ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಸಂತ್ರಸ್ತರಿಗೆಕೂಡಲೇ ಪರಿಹಾರ ವಿತರಿಸಬೇಕು ಎಂಬುದು ಮುಖ್ಯಮಂತ್ರಿ ಸೂಚನೆ. ಅದರಂತೆ ಹರಪನಳ್ಳಿ ಮತ್ತು ಹಡಗಲಿ ತಾಲೂಕುಗಳಲ್ಲಿ ಉಂಟಾಗಿರುವ ಮನೆಗಳ ಹಾನಿಗೆ ಸಂಬಂಧಿಸಿದಂತೆ ಎರಡು ದಿನದೊಳಗೆ ಶೀಘ್ರ ಪರಿಹಾರ ವಿತರಿಸಿ’ ಎಂದರು.

‘ಮನೆಗಳ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಗ್ರಾಮವಾರು ಪಟ್ಟಿಯನ್ನು ಶೇಕಡವಾರು ಹಾನಿಯ ಪ್ರಮಾಣದ ರೂಪದಲ್ಲಿ ಹಾಗೂ ಇದುವರೆಗೆ ವಿತರಿಸಲಾದ ಪರಿಹಾರ ಮತ್ತು ಇನ್ನೂ ವಿತರಿಸಬೇಕಾದ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಪಟ್ಟಿಯನ್ನು ಕೂಡಲೇ ಸಿದ್ದಪಡಿಸಬೇಕು’ಎಂದರು.

‘ಮನೆ ಹಾನಿ ಪ್ರಮಾಣ ಮತ್ತು ಪರಿಹಾರದ ಮೊತ್ತ ನಿಗದಿಯಾಗಿದ್ದು, ಅದರಂತೆಯೇ ಆರ್‌ಟಿಜಿಎಸ್‌ ಮೂಲಕ ವಿತರಿಸಬೇಕು. ಪರಿಹಾರ ವಿತರಿಸುವಾಗ ಮಹಜರು ಮಾಡಬೇಕು. ಫೋಟೊ, ಮನೆ ವಿವರ ಪಡೆದುಕೊಳ್ಳಬೇಕು’ ಎಂದರು.

‘ನೆರೆಯಿಂದ ಮನೆಯೊಳಗಿನ ಬಟ್ಟೆ, ಪಾತ್ರೆ ಹಾಗೂ ಪೀಠೋಪಕರಣಗಳಿಗೆಹಾನಿಯಾಗಿದ್ದರೆ ₹10 ಸಾವಿರ ಪರಿಹಾರ ನೀಡಬಹುದು, ಅದನ್ನು ಇಂದೇ ವಿತರಿಸಿ’ ಎಂದು ಸೂಚಿಸಿದರು.

‘ಹೊಸಪೇಟೆ, ಕಂಪ್ಲಿ ಮತ್ತು ಸಿರಗುಪ್ಪ ತಾಲೂಕಿನಲ್ಲಿ ಹಾನಿಯಾದ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲು ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಕ್ರಮವಹಿಸಬೇಕು’ ಎಂದು ಸೂಚಿಸಿದರು.

‘ಹಡಗಲಿ ಮತ್ತು ಹರಪನಳ್ಳಿಯಲ್ಲಿ ಸಮರ್ಪಕವಾಗಿ ನೆರೆ ನಿರ್ವಹಣೆ ಮಾಡಲಾಗಿದೆ. ಪರಿಹಾರದ ವಿಷಯದಲ್ಲಿಯೂ ಕ್ರಮ ವಹಿಸಲಾಗುವುದು’’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್ ಹೇಳಿದರು.

‘ಸಣ್ಣ ನೀರಾವರಿ ಮತ್ತು ಬೃಹತ್ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಸಂಬಂಧಿಸಿದಂತೆ ನೆರೆಯಿಂದ ಯಾವುದೇ ರೀತಿಯ ಹಾನಿಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT