ಸೋಮವಾರ, ಆಗಸ್ಟ್ 19, 2019
28 °C

ಕೃಷಿಗೆ ನೀರು ಬಿಡಿ: ಆಗ್ರಹ

Published:
Updated:

ಬಳ್ಳಾರಿ: ‘ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಎಲ್ಲ ನಾಲೆಗಳಿಗೂ ತುಂಗಭದ್ರಾ ಜಲಾಶಯದಿಂದ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು’ ಎಂದು ತುಂಗಭದ್ರಾ ರೈತ ಸಂಘವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ‘ಜಲಾಶಯದಲ್ಲಿ ಈಗ ಸಂಗ್ರಹಗೊಂಡಿರುವ ನೀರನ್ನೇ ನಾಲೆಗಳಿಗೆ ಹರಿಸಿದರೆ, ರೈತರು ಕನಿಷ್ಠ ಒಂದು ಅವಧಿಯ ಬೆಳೆಯನ್ನಾದರೂ ಬೆಳೆಯಲು ಅನುಕೂಲವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಲಾಶಯದಲ್ಲಿ ಈಗ 37 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ. ತುಂಗ ಜಲಾಶಯದಿಂದ 76 ಸಾವಿರ ಕ್ಯುಸೆಕ್‌ ನೀರು ಹಾಗೂ ವರದಾ ನದಿಯಿಂದ 8 ಸಾವಿರ ಕ್ಯುಸೆಕ್‌ ನೀರು ದಿನವೂ ಹರಿದು ಬರುತ್ತಿರುವುದರಿಂದ ಕೃಷಿಗೂ ನೀರು ಕೊಡಬೇಕು’ ಎಂದು ಆಗ್ರಹಿಸಿದರು.

‘ಹಿಂದಿನ ವರ್ಷ ಜಲಾಶಯದ ನೀರು ಬಳಸಿಯೇ ರೈತರು ಭತ್ತ ನಾಟಿ ಮಾಡಿದ್ದರು. ಈ ಬಾರಿ ಬಿತ್ತನೆಯೇ ಆಗಿಲ್ಲ. ಹೀಗಾಗಿ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು. 

ಮುಖಂಡರಾದ ವೀರೇಶ್‌, ಸಿ.ವೀರಭಧ್ರರಾವ್ಟಿ, ಟಿ.ರಂಜಾನ್‌ ಸಾಬ್‌ ಇದ್ದರು. 

Post Comments (+)