ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಹಲ್ಲೆ ನಡೆಸದಂತೆ ಪಿಎಸ್ಐಗೆ ತಡೆ, ಖಾಕಿ ಗೌರವ ಹೆಚ್ಚಿಸಿದ ಸಿಬ್ಬಂದಿ!

ಹಲ್ಲೆ ನಡೆಸದಂತೆ ಪಿಎಸ್ಐ ತಡೆದಿದ್ದ ಅಧೀನ ಸಿಬ್ಬಂದಿ
Last Updated 20 ಆಗಸ್ಟ್ 2022, 5:11 IST
ಅಕ್ಷರ ಗಾತ್ರ

ಬಳ್ಳಾರಿ: ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಆ. 10ರಂದು ರೈತ ಹೊನ್ನೂರಸ್ವಾಮಿ ಮೇಲೆ ಹಲ್ಲೆ ನಡೆಸಲು ಮುನ್ನುಗ್ಗುವ ಕುರುಗೋಡು ಠಾಣೆಯ ಪಿಎಸ್‌ಐ ಮಣಿಕಂಠ ಅವರನ್ನು ದೈಹಿಕವಾಗಿ ತಡೆಯುವ ಮೂಲಕ ಅದೇ ಠಾಣೆ ಸಿಬ್ಬಂದಿ ಪೊಲೀಸ್‌ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆಂದು ಪ್ರಶಂಸೆ ವ್ಯಕ್ತವಾಗುತ್ತಿವೆ.

ಪ್ರತಿಭಟನೆಯೊಂದರವೇಳೆ ಹೊನ್ನೂರಸ್ವಾಮಿ ಅವರ ಮೇಲೆ ಕೋಪಗೊಂಡ ಮಣಿಕಂಠ, ಏಕಾಏಕಿ ಹಲ್ಲೆ ನಡೆಸಲು ಆರಂಭಿಸುವ ದೃಶ್ಯ ವಿಡಿಯೊದಲ್ಲಿ ರೆಕಾರ್ಡ್‌ ಆಗಿದೆ.

ಅಲ್ಲೇ ಇದ್ದ ಎಎಸ್‌ಐ ಹೂವಣ್ಣ, ಹೆಡ್‌ಕಾನ್‌ಸ್ಟೆಬಲ್‌ ಶರಣಪ್ಪ ಹಾಗೂ ಕಾನ್‌ಸ್ಟೆಬಲ್‌ ರಂಗಪ್ಪ ಮತ್ತಿತರರು ಪಿಎಸ್‌ಐ ಅವರನ್ನು ತಡೆದು ಹಿಂದಕ್ಕೆ ತಳ್ಳಿಕೊಂಡು ಹೋಗುತ್ತಾರೆ. ‘ಏಯ್‌ ಬಿಡ್ರಿ ಸಾರ್‌, ಕೂತು ಮಾತಾಡಿ ಬಗೆಹರಿಸಿಕೊಳ್ಳಿ’ ಎಂದು ಹೂವಣ್ಣ ಗಟ್ಟಿ ದನಿಯಲ್ಲಿ ಹೇಳುವುದು ವಿಡಿಯೊದಲ್ಲಿದೆ.

ತಮ್ಮ ಸಿಬ್ಬಂದಿಯನ್ನು ತಳ್ಳಿಕೊಂಡು ಮಣಿಕಂಠ ‍ಪುನಃ ಹೊನ್ನೂರಸ್ವಾಮಿ ಮೇಲೆರಗಿ ಹೋಗುತ್ತಾರೆ. ಬಹುಶಃ ಅಧೀನ ಪೊಲೀಸ್‌ ಸಿಬ್ಬಂದಿ ‍ಪಿಎಸ್‌ಐ ಅವರನ್ನು ದೈಹಿಕವಾಗಿ ತಡೆಯದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆಹೋಗುತ್ತಿತ್ತು ಎಂದು ‍ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಇಡೀ ಘಟನೆಯನ್ನು ಗಮನಿಸಿದರೆ ಹೊನ್ನೂರಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲು ಪೂರ್ವನಿಯೋಜಿತ ಸಂಚು ಮಾಡಿರಬಹುದು’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ‘ಸಾರ್ವಜನಿಕರ ಎದುರೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಹಿರಿಯ ಅಧಿಕಾರಿಯನ್ನು ದೈಹಿಕವಾಗಿ ತಡೆಯುವ; ನೀವು ಮಾಡುವುದು ಸರಿಯಲ್ಲ’ ಎಂದು ಕೆಳಗಿನ ಸಿಬ್ಬಂದಿ ಬುದ್ಧಿ ಹೇಳುವುದು ಅಪರೂಪದಲ್ಲಿ ಅಪರೂಪ ಎಂಬ ಅಭಿಪ್ರಾಯ ಪೊಲೀಸ್‌ ಇಲಾಖೆಯಲ್ಲಿ ವ್ಯಕ್ತವಾಗಿವೆ.

ಕುರುಗೋಡಿನಲ್ಲಿ ಆ. 10ರಂದು ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಂಧನ ತಪ್ಪಿಸಿಕೊಳ್ಳಲು ಮಣಿಕಂಠ ತಲೆಮರೆಸಿಕೊಂಡಿದ್ದಾರೆ.

ದೈಹಿಕವಾಗಿ ಮುಟ್ಟುವಂತಿಲ್ಲ!
ಪೊಲೀಸ್‌ ಇಲಾಖೆಯ ಸಂಹಿತೆ ಪ್ರಕಾರ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಅಧೀನ ಸಿಬ್ಬಂದಿ ದೈಹಿಕವಾಗಿ ಮುಟ್ಟಿ, ಬುದ್ಧಿ ಹೇಳುವಂತಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೂ, ‘ಕುರುಗೋಡು ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಯನ್ನು ತಳ್ಳಿಕೊಂಡು ಹೋಗುತ್ತಾರೆ. ಅಲ್ಲದೆ, ನೀವು ಮಾಡುವುದು ಸರಿಯಲ್ಲ ಎಂದು ಧೈರ್ಯವಾಗಿ ಹೇಳುತ್ತಾರೆ. ಆ ಮೂಲಕ ಇಲಾಖೆ ಗೌರವ ಹೆಚ್ಚಿಸಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT