ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಕ್ಕು ಹಿಡಿಯುತ್ತಿರುವ ದ್ವಿಚಕ್ರ ವಾಹನಗಳು

ಸೌಲಭ್ಯವಿಲ್ಲದೆ ಒಂದು ವರ್ಷದಿಂದ ಪರದಾಡುತ್ತಿರುವ ಅಂಗವಿಕಲರು
Last Updated 11 ಜೂನ್ 2018, 8:47 IST
ಅಕ್ಷರ ಗಾತ್ರ

ಬೀದರ್: ಅಂಗವಿಕಲ ಫಲಾನುಭವಿಗಳಿಗೆ ವಿತರಿಸಲು ಜಿಲ್ಲಾ ಆಡಳಿತದಿಂದ 2017ರಲ್ಲಿ ಖರೀದಿಸಲಾದ 34 ದ್ವಿಚಕ್ರ ವಾಹನಗಳು ಒಂದು ವರ್ಷದಿಂದ ನಗರಸಭೆಯ ಆವರಣದಲ್ಲಿ ದೂಳು ತಿನ್ನುತ್ತಿವೆ. ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲಿನಿಂದ ಈಗಾಗಲೇ ವಾಹನಗಳ ಬಣ್ಣ ಮಾಸಿದೆ. ಈಗ ಮಳೆಯಲ್ಲಿ ನೆನೆಯುತ್ತಿದ್ದು, ತುಕ್ಕು ಹಿಡಿಯಲಾರಂಭಿಸಿವೆ.

ಇಲ್ಲಿಯ ನಗರಸಭೆ ಆಯುಕ್ತರ ಕಚೇರಿ ಮುಂಭಾಗದ ಖಾಲಿ ಜಾಗದಲ್ಲಿ ಎಲ್ಲ ದ್ವಿಚಕ್ರ ವಾಹನಗಳನ್ನು ಇಡಲಾಗಿದೆ. ಈಗಾಗಲೇ ವಾಹನ ವಿತರಕರು ವಾಹನಗಳ ನಿರ್ವಹಣೆಗೆ ಕೊಡುವ ಉಚಿತ ಸೇವಾ ಅವಧಿಯು ಮುಗಿದಿದೆ. ನಗರಸಭೆಗೆ ಬರುವ ಪ್ರತಿಯೊಬ್ಬರೂ ಇಲ್ಲಿ ದ್ವಿಚಕ್ರ ವಾಹನಗಳನ್ನು ಇಟ್ಟಿದ್ದು ಏಕೆ ಎಂದು ಸಹಜವಾಗಿಯೇ ಪ್ರಶ್ನಿಸುತ್ತಾರೆ. ಆದರೆ, ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ತಲೆ ಕೆಡಿಸಿಕೊಂಡಿಲ್ಲ.

ಸರ್ಕಾರದ ಸೌಲಭ್ಯಗಳಿಗೆ ಚಾತಕ ಪಕ್ಷಿಯಂತೆ ಕಾದು ಕೂತಿರುವ ಬಡ ಅಂಗವಿಕಲ ಫಲಾನುಭವಿಗಳು ತಮ್ಮ ಕಣ್ಣೆದುರೇ ದ್ವಿಚಕ್ರ ವಾಹನಗಳು ಹಾಳಾಗುತ್ತಿರುವುದನ್ನು ಕಂಡು ಮರಗುತ್ತಿದ್ದಾರೆ. ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನೆಪ ಹಾಗೂ ಶಾಸಕರಿಂದ ಫಲಾನುಭವಿಗಳ ಪಟ್ಟಿ ಬರುವ ನಿರೀಕ್ಷೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಿಂದ ನಗರಸಭೆಗೆ 2016ರ ಸೆಪ್ಟೆಂಬರ್‌ 9 ರಂದು ಅಂಗವಿಕಲರಿಗಾಗಿ ತ್ರಿಚಕ್ರ ವಾಹನಗಳನ್ನು ಖರೀದಿಸುವಂತೆ ಪತ್ರ ಕಳಿಸಲಾಗಿತ್ತು. ನಗರಸಭೆ ವತಿಯಿಂದ 2016ರ ಡಿಸೆಂಬರ್ 1ರಂದು ಟೆಂಡರ್‌ ಕರೆದರೂ ಒಂದು ಅರ್ಜಿ ಮಾತ್ರ ಬಂದಿತ್ತು. ಹೀಗಾಗಿ ಜಿಲ್ಲಾಧಿಕಾರಿ ಮರು ಟೆಂಡರ್‌ ಕರೆಯುವಂತೆ ಆದೇಶ ನೀಡಿದ್ದರು.

2017 ಮೇ 15ರಂದು ಟೆಂಡರ್‌ ಕರೆದಾಗಲೂ ಒಂದೇ ಅರ್ಜಿ ಬಂದಿತ್ತು. ಹೀಗಾಗಿ ಆಗಿನ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅವರು ವಾಹನ ವಿತರಕರನ್ನು ಕರೆಸಿ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಕೊಡುವಂತೆ ಮನವೊಲಿ ಸಿದ್ದರು. ವಿತರಕರು ₹ 66 ಸಾವಿರ ಬೆಲೆಯ ವಾಹನಗಳನ್ನು ₹ 62,500ಕ್ಕೆ ಕೊಡಲು ಒಪ್ಪಿಗೆ ಸೂಚಿಸಿದ್ದರು. 2017ರ ಆಗಸ್ಟ್‌ 14 ರಂದು ಈ ಒಪ್ಪಂದ ಆಗಿದೆ. ಜಿಲ್ಲಾ ಆಡಳಿತ ಒಟ್ಟು 34 ತ್ರಿಚಕ್ರ ವಾಹನಗಳನ್ನು ಖರೀದಿಸಿದೆ.

ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಸಬೇಕು. ಶಾಸಕ ರಹೀಂ ಖಾನ್‌ ಅವರು ಸೂಚಿಸಿದ ನಾಲ್ವರಿಗೆ ದ್ವಿಚಕ್ರ ವಾಹನ ವಿತರಿಸಿದ ನಂತರ ಹಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಫಲಾನುಭವಿಗಳ ಪಟ್ಟಿಯನ್ನು ಪುನರ್‌ ಪರಿಶೀಲನೆಗೆ ಸೂಚನೆ ನೀಡಲಾಗಿತ್ತು.

‘ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಒಬ್ಬರು, ರಘನಾಥ ಮಲ್ಕಾಪುರೆ ಇಬ್ಬರು ಫಲಾನುಭವಿಗಳ ಹೆಸರು ಶಿಫಾರಸು ಮಾಡಿದ್ದಾರೆ. ಶಾಸಕರಾಗಿದ್ದ ಅಶೋಕ ಖೇಣಿ ಹಾಗೂ ಶಾಸಕ ರಹೀಂ ಖಾನ್‌ ಅವರಿಂದ ಫಲಾನುಭವಿಗಳ ಆಯ್ಕೆ ಪಟ್ಟಿ ಬಾರದ ಕಾರಣ ದ್ವಿಚಕ್ರ ವಾಹಗಳ ವಿತರಣೆಯಾಗಿಲ್ಲ’ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ಶಾಸಕರ ಒಟ್ಟು ಅನುದಾನದಡಿ ಅಂಗವಿಕಲರ ಪ್ರಗತಿಗೆ ಮೀಸಲಿರಿಸಿದ್ದ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಗುತ್ತಿದೆ. 2016ರಲ್ಲೇ ವಾಹನ ಖರೀದಿಸಿದರೂ ಅಂಗವಿ ಕಲರಿಗೆ ಅವುಗಳನ್ನು ನೀಡುತ್ತಿಲ್ಲ. ಅಂಗವಿಕಲ ಫಲಾನುಭವಿಗಳಿಗೆ ಸರ್ಕಾರಿ ಸೌಕರ್ಯ ದೊರಕಿಸಿಕೊಡಲು ಅಧಿಕಾರಿಗಳು ಆಸಕ್ತಿ ವಹಿಸಬೇಕು ಎಂದು ಚುನಾಯಿತ ಪ್ರತಿನಿಧಿಗಳು ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅಂಗವಿಕಲರಿಗೆ ಸೌಲಭ್ಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಂಗವಿಕಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಆಡಳಿತದ ಸೂಚನೆಯಂತೆ ಕಳೆದ ವರ್ಷ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ನಿಧಿಯಡಿ ಒಟ್ಟು 34 ದ್ವಿಚಕ್ರ ವಾಹನಗಳನ್ನು ಖರೀದಿಸಲಾಗಿದೆ
ಮನೋಹರ, ನಗರಸಭೆ ಆಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT