ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬಳ್ಳಾರಿ ಬಿರಿಯಾನಿಗೆ ಮನಸೋತಿದ್ದ ಪುನೀತ್‌

ಹಂಪಿ ಪರಿಸರ ಅಪ್ಪುಗೆ ಅಚ್ಚುಮೆಚ್ಚು
Last Updated 30 ಅಕ್ಟೋಬರ್ 2021, 1:31 IST
ಅಕ್ಷರ ಗಾತ್ರ

ಹೊಸಪೇಟೆ: ಡಾ. ರಾಜ್‌ ಮನೆತನದ ಕುಡಿ ಪುನೀತ್‌ ರಾಜಕುಮಾರ್‌ ಅವರಿಗೆ ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರದೊಂದಿಗೆ ವಿಶೇಷ ನಂಟಿತ್ತು.

ವರ್ಷದಲ್ಲಿ ಕನಿಷ್ಠ ನಾಲ್ಕೈದು ಬಾರಿ ಹಂಪಿ, ಸಂಡೂರಿಗೆ ಪುನೀತ್‌ ಭೇಟಿ ಕೊಡುತ್ತಿದ್ದರು. ಅವರ ಹೆಚ್ಚಿನ ಚಿತ್ರಗಳು ಈ ಎರಡೂ ಭಾಗಗಳಲ್ಲಿ ಚಿತ್ರೀಕರಣಗೊಂಡಿರುವುದು ಮತ್ತೊಂದು ವಿಶೇಷ.

ಪುನೀತ್‌ ರಾಜಕುಮಾರ್‌ ಅವರಿಗೆ ಮೊದಲಿನಿಂದಲೂ ಹಂಪಿಯ ಪರಿಸರವೆಂದರೆ ಬಹಳ ಅಚ್ಚುಮೆಚ್ಚು. ತುಂಗಭದ್ರಾ ನದಿ ದಂಡೆಯಲ್ಲಿ ಸುತ್ತಾಡುವುದು, ಅಂಜನಾದ್ರಿ, ಮಾತಂಗ ಬೆಟ್ಟ ಹತ್ತುವುದು ಅವರ ಅಭಿರುಚಿಯಾಗಿತ್ತು. ಉತ್ತರ ಕರ್ನಾಟಕದ ಜೋಳದ ರುಚಿ ಇಷ್ಟಪಟ್ಟು ಸವಿಯುತ್ತಿದ್ದರು. ಇನ್ನು, ಇಲ್ಲಿಗೆ ಬಂದಾಗಲೆಲ್ಲಾ ಆಪ್ತರಿಗೆ ಹೇಳಿ ‘ಬಳ್ಳಾರಿ ಬಿರಿಯಾನಿ’ ತರಿಸಿಕೊಂಡು ತಿನ್ನುತ್ತಿದ್ದರು.

ಹೋದ ತಿಂಗಳಷ್ಟೇ ಅವರು ಜಿಲ್ಲೆಗೆ ಬಂದಿದ್ದರು. ನಿರ್ದೇಶಕ ಅಮೋಘವರ್ಷ ಅವರು ‘ಗಂಧದ ಗುಡಿ ಸಮರ್ಪಣೆ’ ಕಿರುಚಿತ್ರ ಮಾಡುತ್ತಿದ್ದಾರೆ. ಅದರ ಭಾಗವಾಗಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಕರಡಿಧಾಮ, ಹಂಪಿ ದರೋಜಿ ಕರಡಿಧಾಮ, ಹಂಪಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಾಕ್ಷ್ಯಚಿತ್ರ ಅರಣ್ಯ, ಜೀವ ಸಂಕುಲದ ಮೇಲೆ ಬೆಳಕು ಚೆಲ್ಲಲಿದೆ. ಚಿತ್ರೀಕರಣದ ವೇಳೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಕುರಿ ಕಾಯುವವರೊಂದಿಗೆ ಕುಳಿತು ರೊಟ್ಟಿ ಊಟ ಮಾಡಿದ್ದರು. ಈಗಲೂ ಸ್ಥಳೀಯರು ಅದನ್ನು ನೆನಪಿಸಿಕೊಳ್ಳುತ್ತಾರೆ.

ಗಲ್ಲಾ‍ಪೆಟ್ಟಿಗೆ ದೋಚಿದ್ದ ‘ಪೃಥ್ವಿ’ ಸಿನಿಮಾದ ಚಿತ್ರೀಕರಣ ಸಂಡೂರು, ಬಳ್ಳಾರಿಯಲ್ಲಿ ಆಗಿತ್ತು. ಅಕ್ರಮ ಗಣಿಗಾರಿಕೆಯ ಕಥಾವಸ್ತು ಹೊಂದಿದ್ದ ಈ ಚಿತ್ರ ರಾಜ್ಯದಾದ್ಯಂತ ದೊಡ್ಡ ಸದ್ದು ಮಾಡಿತ್ತು. ಅದೇ ರೀತಿ ‘ದೊಡ್ಮನೆ ಹುಡ್ಗ’, ‘ರಣವಿಕ್ರಂ‘ ಚಿತ್ರದ ಚಿತ್ರೀಕರಣವೂ ಇಲ್ಲಿಯೇ ನಡೆದಿತ್ತು.

ಬಳ್ಳಾರಿಯ ಕನಕ ದುರ್ಗಮ್ಮ ದೇವಿ ದೇವಸ್ಥಾನ ಮತ್ತು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ದೊಡ್ಮನೆ ಹುಡ್ಗ’ದ ಚಿತ್ರೀಕರಣ ನೋಡಲು ಸಾವಿರಾರು ಜನ ನೆರೆದಿದ್ದರು. ಅಷ್ಟೇ ಅಲ್ಲ, 2017ರ ಡಿಸೆಂಬರ್‌ನಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ‘ಟಗರು’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭಕ್ಕೂ ಪುನೀತ್‌ ಬಂದಿದ್ದರು. ರಾಜ್‌ ಕುಟುಂಬದ ಎಲ್ಲ ಸದಸ್ಯರು ಅದರಲ್ಲಿ ಪಾಲ್ಗೊಂಡಿದ್ದರು. ಅದನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಸೇರಿತ್ತು.

ಕೆಲ ತಿಂಗಳ ಹಿಂದೆ ಅವರ ಬಹುನಿರೀಕ್ಷಿತ ‘ಜೇಮ್ಸ್‌’ ಚಿತ್ರದ ಚಿತ್ರೀಕರಣ ಹಂಪಿ, ಕಮಲಾಪುರ, ಅಂಜನಾದ್ರಿ ಪರಿಸರದಲ್ಲಿ ನಡೆದಿತ್ತು. ಸುಮಾರು ಎರಡು ವಾರ ಪುನೀತ್‌ ಅವರು ಚಿತ್ರ ತಂಡದೊಂದಿಗೆ ಅಲ್ಲಿ ಬೀಡು ಬಿಟ್ಟಿದ್ದರು. ಈ ವಿಷಯ ಗೊತ್ತಾಗಿ ಅನೇಕ ಜನ ಅವರಿರುವ ಹೋಟೆಲ್‌ಗೆ ಧಾವಿಸಿದ್ದರು. ಯಾರ ಮನಸ್ಸು ನೋಯಿಸದೆ ಎಲ್ಲರಿಗೂ ಸಮಯ ಕೊಟ್ಟು ಸೆಲ್ಫಿಗೆ ಪೋಸ್ ಕೊಟ್ಟಿದ್ದರು. ಎಲ್ಲರೊಂದಿಗೆ ಮುಕ್ತವಾಗಿ ಬೆರೆತ್ತಿದ್ದರು.

‘ಪುನೀತ್‌ ಅವರಲ್ಲಿ ಡಾ. ರಾಜಕುಮಾರ್‌ ಅವರ ಗುಣಗಳಿದ್ದವು. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ, ಮಾತನಾಡುವ ಸರಳ ಸ್ವಭಾವವಿತ್ತು. ಹಂಪಿಯಲ್ಲಿ ಕೆಲವು ದಿನಗಳ ಕಾಲ ಚಿತ್ರೀಕರಣವಿದ್ದಾಗ ನಿತ್ಯ ನೂರಾರು ಜನ ಅವರನ್ನು ಕಾಣಲು ಬರುತ್ತಿದ್ದರು. ಅದಕ್ಕಾಗಿ ಅವರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ದೂರದಿಂದ ಬರುವ ಜನರಿಗೆ ತೊಂದರೆ ಆಗಬಾರದು ಎಂದು ಹೇಳುತ್ತಿದ್ದರು. ಇಂತಹ ಮನುಷ್ಯ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗಬಾರದಿತ್ತು’ ಎಂದು ಪತ್ರಕರ್ತ ಸತೀಶ್‌ ಬಿಲ್ಲಾಡಿ ನೆನಪು ಮಾಡಿಕೊಂಡರು.

ನೋವಿಗೆ ಮಿಡಿದಿದ್ದ ‘ದೊಡ್ಮನೆ ಹುಡ್ಗ’
ತನ್ನ ಅಭಿಮಾನಿ, ನಗರದ ತಳವಾರಕೇರಿ ನಿವಾಸಿ ಆದರ್ಶ ಎಂಬ ಬಾಲಕ ವಿಚಿತ್ರ ಕಾಯಿಲೆಯಿಂದ ನರಳಾಡುತ್ತಿದ್ದ ವಿಷಯ ತಿಳಿದು ಪುನೀತ್‌ ರಾಜಕುಮಾರ್‌ ನೆರವಾಗಿದ್ದರು. ಸ್ವತಃ ಅವರೇ ಬೆಂಗಳೂರಿಗೆ ಕರೆಸಿಕೊಂಡು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದರು.

ಅಭಿಮಾನಿಯ ನೋವಿಗೆ ಸ್ಪಂದಿಸಿ, ಅವನ ಚಿಕಿತ್ಸೆಗೆ ನೆರವಾಗುವ ಮೂಲಕ ನಟ ಪುನೀತ್‌ ಅವರು ತಾನು ನಿಜವಾಗಲೂ ‘ದೊಡ್ಮನೆ ಹುಡ್ಗ’ ಎಂಬುದನ್ನು ತೋರಿಸಿಕೊಟ್ಟಿದ್ದರು. ಇತ್ತೀಚೆಗೆ ಅವರು ಅವರ ಅಭಿಮಾನಿ ಕಿಚಡಿ ವಿಶ್ವ ಅವರ ಮನೆಗೆ ದಿಢೀರ್‌ ಭೇಟಿ ಕೊಟ್ಟು ಎಲ್ಲರನ್ನೂ ಚಕಿತಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT