ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಸ್ಕೃತಿ ಕಟ್ಟಿಕೊಡುವಲ್ಲಿ ಸಿನಿಮಾ ರಂಗದ ಪಾತ್ರ ಮಹತ್ವದ್ದು: ರಘುನಾಥ ಚ.ಹ

‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಭಿಮತ
Last Updated 31 ಜನವರಿ 2021, 10:19 IST
ಅಕ್ಷರ ಗಾತ್ರ

ಹೊಸಪೇಟೆ: ‘ಕನ್ನಡ ಸಂಸ್ಕೃತಿ ಕಟ್ಟಿಕೊಡಲು ಸಿನಿಮಾ ರಂಗ ಮಹತ್ವದ ಪಾತ್ರ ನಿರ್ವಹಿಸಿದೆ’ ಎಂದು ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಹೇಳಿದರು.

ಸಿರಿಗೇರಿ ಅನ್ನಪೂರ್ಣ ಪ್ರಕಾಶನವು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಅವರು ಬರೆದ ‘ನಮೋ ವೆಂಕಟೇಶ’, ಯುವ ಪತ್ರಕರ್ತ ಪದ್ಮನಾಭ ಭಟ್‌ ಅವರ ‘ಉಳಿದಾವ ಮಾತು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಕನ್ನಡದ ಸಂಸ್ಕೃತಿಯ ಔದಾರ್ಯ, ಘನತೆಯನ್ನು ಸಣ್ಣ ಸಣ್ಣ ವಸ್ತುಗಳಲ್ಲಿ ಕಾಣಬಹುದು. ಈ ಕಾರಣಕ್ಕಾಗಿಯೇ ಕುವೆಂಪು, ಬೇಂದ್ರೆ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತೇವೆ. ಪುಸ್ತಕ, ಸಿನಿಮಾ ಕೂಡ ಸಂಸ್ಕೃತಿಯ ಒಂದು ಭಾಗ. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮದ ಮೂಲಕ ಸಂಸ್ಕೃತಿ ಕಟ್ಟಿಕೊಳ್ಳಲು ಮುಂದಾಗಿರುವ ಅಪಾಯಕಾರಿ ಸನ್ನಿವೇಶದಲ್ಲಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಡಾ. ರಾಜಕುಮಾರ ಅವರು ಕನ್ನಡ ಸಂಸ್ಕೃತಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕುವೆಂಪು, ಬೇಂದ್ರೆ ಅವರಷ್ಟೇ ರಾಜಕುಮಾರ ಕೂಡ ಪ್ರಮುಖರು. ರಂಜನೆಯ ಜತೆಗೆ ಭಾಷೆ, ಕೌಟುಂಬಿಕ ಮಾದರಿಯನ್ನು ರಾಜಕುಮಾರ ಕಟ್ಟಿಕೊಟ್ಟಿದ್ದಾರೆ. ಗಿರೀಶ ಕಾಸರವಳ್ಳಿ ಸಹ ಅವರ ಸಿನಿಮಾಗಳಲ್ಲಿ ಬಹುತ್ವವನ್ನು ಪರಿಣಾಮಕಾರಿ ತೋರಿಸುತ್ತ ಬಂದಿದ್ದಾರೆ’ ಎಂದು ಹೇಳಿದರು.

ಪದ್ಮನಾಭ ಭಟ್‌ ಮಾತನಾಡಿ, ‘ಮಾತು ಮಾತಾಗಿಯೇ ಇರಬೇಕಿತ್ತು. ಆದರೆ, ಅದು ಆಯುಧವಾಗಿ, ಹಣಿಯಲು ಬಳಸಲಾಗುತ್ತಿದೆ. ಪ್ರಭುತ್ವ ಪ್ರಜೆಗಳನ್ನು ಮೋಸಗೊಳಿಸಲು ಉಪಯೋಗಿಸುತ್ತಿದೆ. ಮಾತು ವಿಕೃತಿ ಪಡೆಯುತ್ತಿರುವ ಕಾಲಘಟ್ಟವಿದು’ ಎಂದರು.

ಪುಸ್ತಕ ಬಿಡುಗಡೆಗೊಳಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ, ‘ರಾಜಕುಮಾರ ಅವರ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಅನೇಕ ಯುವಕರು ನಗರಗಳನ್ನು ತೊರೆದು ಕೃಷಿಯತ್ತ ಮರಳಿದ್ದರು. ಸಿನಿಮಾಗಳು ರಂಜನೆಗಷ್ಟೇ ಸೀಮಿತವಾದುದ್ದಲ್ಲ. ಅವುಗಳಲ್ಲಿ ಮೌಲ್ಯ ಅಡಕವಾಗಿದೆ. ಹಿಂದಿನ ಸಿನಿಮಾಗಳನ್ನು ಮನೆ ಮಂದಿಯೆಲ್ಲ ಒಂದೆಡೆ ಕುಳಿತು ನೋಡಬಹುದಿತ್ತು. ಆದರೆ, ಪರಿಸ್ಥಿತಿ ಈಗ ಹಾಗಿಲ್ಲ. ಸಿನಿಮಾ ಶಕ್ತಿಯುತ ಜನತಾ ಶಿಕ್ಷಣ ಮಾಧ್ಯಮವಾಗಿದೆ. ಜನರಲ್ಲಿ ತಿಳಿವಳಿಕೆ ಮೂಡಿಸುವ ಶಕ್ತಿ ಹೊಂದಿದೆ. ಅದು ಅದಕ್ಕಾಗಿಯೇ ಬಳಕೆಯಾಗಬೇಕು’ ಎಂದು ಹೇಳಿದರು.

ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಎಸ್‌.ಎಂ. ಶಶಿಧರ ಮಾತನಾಡಿ, ‘ನಮೋ ವೆಂಕಟೇಶ’ ಎಂದು ಪುಸ್ತಕಕ್ಕೆ ಶೀರ್ಷಿಕೆ ಕೊಟ್ಟಿರುವುದು ಬಹಳ ಅರ್ಥಪೂರ್ಣ. ಹಿಂದೆ ಟೆಂಟ್‌ಗಳಲ್ಲಿ ಸಿನಿಮಾ ಆರಂಭಗೊಳ್ಳುವುದಕ್ಕೂ ಮುನ್ನ ನಮೋ ವೆಂಕಟೇಶ ಹಾಡು ಹಾಕುತ್ತಿದ್ದರು. ಪುಸ್ತಕದಲ್ಲಿ ಸಿನಿಮಾ ವಿಮರ್ಶೆ, ರಸಸ್ವಾದ ಇದೆ’ ಎಂದು ತಿಳಿಸಿದರು. ಅನ್ನಪೂರ್ಣ ಪ್ರಕಾಶನದ ಯರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT