ಮಂಗಳವಾರ, ಮಾರ್ಚ್ 21, 2023
20 °C

ಭಾರಿ ಮಳೆಗೆ ಮನೆ, ಗದ್ದೆಗೆ ನೀರು: ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿ, ಇಬ್ಬರ ಜೀವ ತೆಗೆದುಕೊಂಡಿದೆ.

ಹೂವಿನಹಡಗಲಿ ತಾಲ್ಲೂಕಿನ ಪಶ್ಚಿಮ ಕಾಲ್ವಿ ಗ್ರಾಮದ ಬಳಿ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಮೋಟಾರ್‌ ಬೈಕ್‌ ಸಮೇತ ದಂಪತಿ ಕೊಚ್ಚಿ ಹೋಗಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮುತ್ಕೂರು ಗ್ರಾಮದ ಮಲ್ಲಿಕಾರ್ಜುನ (55), ಅವರ ಪತ್ನಿ ಸುಮಂಗಲಮ್ಮ (48) ಮೃತರು. ಮುಂಡರಗಿ ತಾಲ್ಲೂಕಿನ ತಳಕಲ್ಲು ಗ್ರಾಮದಲ್ಲಿ ಸಂಬಂಧಿಕರನ್ನು ಭೇಟಿಯಾಗಿ ವಾಪಸ್‌ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಬುಧವಾರ ಹಳ್ಳದಲ್ಲಿ ಇಬ್ಬರ ಶವ ಪತ್ತೆಯಾಗಿವೆ.

ಭಾರಿ ಮಳೆಗೆ ಹೂವಿನಹಡಗಲಿಯಲ್ಲಿ ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಜೆಸ್ಕಾಂ ಉಪವಿಭಾಗ ಕಚೇರಿ, ವಸತಿ ಗೃಹ, ನ್ಯಾಯಾಲಯ ಆವರಣ ನೀರಿನಿಂದ ಆವೃತವಾಗಿತ್ತು. ಬಳಿಕ ಪುರಸಭೆ ಸಿಬ್ಬಂದಿ ಮೋಟಾರ್‌ನಿಂದ ನೀರು ತೆಗೆದರು. ಉದ್ಯೋಗ ಖಾತ್ರಿ ಯೋಜನೆ ಅಡಿ ನಿರ್ಮಾಣಗೊಂಡ ಗೋಕಟ್ಟೆ, ಚೆಕ್‌ ಡ್ಯಾಂ, ನಾಲಾಗಳು ತುಂಬಿ ಹರಿದಿವೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಟ್ಟಮ್ಮನಹಳ್ಳಿಯಲ್ಲಿ ರೈತ ಜಾತಪ್ಪ ಅವರ ಗದ್ದೆಯಲ್ಲಿನ ಕೃಷಿ ಹೊಂಡ ಒಡೆದಿದ್ದರಿಂದ ಮೂರುವರೆ ಎಕರೆಯಲ್ಲಿ ಬೆಳೆದು ನಿಂತಿದ್ದ ಪಪ್ಪಾಯಿ, ದಾಳಿಂಬೆ ಸಂಪೂರ್ಣ ನಾಶವಾಗಿದೆ. ಇನ್ನು, ಸಕ್ರಹಳ್ಳಿಯಲ್ಲಿ 9.5 ಎಕರೆ ಮೆಕ್ಕೆಜೋಳ, 1.5 ಎಕರೆ ಕಬ್ಬು ಬೆಳೆ ಹಾನಿಯಾಗಿದೆ. ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು