ಬುಧವಾರ, ನವೆಂಬರ್ 13, 2019
21 °C
ಇಂಗ್ಲಿಷ್‌ ಭಾಷೆ ವ್ಯಾಮೋಹ ತೊರೆದು ಕನ್ನಡ ಪ್ರೀತಿ ಬೆಳೆಸೋಣ–ಶೇಖ್‌ ತನ್ವೀರ್‌ ಆಸಿಫ್‌

ಕನ್ನಡ ಡಿಂಡಿಮ; ಭುವನೇಶ್ವರಿಗೆ ಜೈಕಾರ

Published:
Updated:
Prajavani

ಹೊಸಪೇಟೆ: ಎಲ್ಲಿ ನೋಡಿದರಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು, ತಾಯಿ ಭುವನೇಶ್ವರಿ ದೇವಿಯ ರಥ ಎಳೆದ ಸಂಭ್ರಮ, ಕನ್ನಡ ತಾಯಿಗೆ ಜಯವಾಗಲಿ ಎಂದು ಮೊಳಗಿದ ಘೋಷಣೆಗಳು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ಕಂಡು ಬಂದ ದೃಶ್ಯಗಳಿವು.

ಬೆಳಿಗ್ಗೆಯಿಂದಲೇ ಎಲ್ಲೆಡೆ ಹಬ್ಬದ ವಾತಾವರಣ ಇತ್ತು. ಸರ್ಕಾರಿ ಕಚೇರಿ, ಶಾಲಾ–ಕಾಲೇಜುಗಳಲ್ಲಿ ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಗಳು, ಸಿಬ್ಬಂದಿ ಮುನ್ಸಿಪಲ್‌ ಮೈದಾನದ ಕಡೆಗೆ ಹೆಜ್ಜೆ ಹಾಕಿದರು. 

ಹೂಗಳಿಂದ ವಿಶಿಷ್ಟವಾಗಿ ಅಲಂಕರಿಸಿದ ತೇರಿನಲ್ಲಿ ಪ್ರತಿಷ್ಠಾಪಿಸಿದ್ದ ಭುವನೇಶ್ವರಿ ದೇವಿಗೆ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸೀಫ್‌ ಅವರು ಪೂಜೆ ಸಲ್ಲಿಸಿದರು. ಬಳಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಇದಾದ ಬಳಿಕ ಪೊಲೀಸ್‌, ಗೃಹರಕ್ಷಕ ದಳ, ವಿವಿಧ ಶಾಲಾ ಕಾಲೇಜಿನ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ನಗರದ ಪ್ರಮುಖ ಮಾರ್ಗಗಳಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಜರುಗಿತು. ಅಲಂಕರಿಸಿದ ವಾಹನದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರ, ಶರಣರು– ದಾಸರ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು. ವಿದ್ಯಾರ್ಥಿಗಳು ಕನ್ನಡದ ಬಾವುಟಗಳನ್ನು ಹಿಡಿದುಕೊಂಡು ಶಿಸ್ತಿನಿಂದ ಹೆಜ್ಜೆ ಹಾಕಿದರು. 

ಹಂಪಿ ವಿರೂಪಾಕ್ಷ ಹಾಗೂ ಪಂಪಾಂಬಿಕೆ ದೇವಿಗೆ ಪೂಜೆ ಸಲ್ಲಿಸಿ ಅಲ್ಲಿಂದ ನಗರಕ್ಕೆ ತಂದಿದ್ದ ಜ್ಯೋತಿಯನ್ನು ಉಪವಿಭಾಗಾಧಿಕಾರಿ ಬರಮಾಡಿಕೊಂಡು, ಬಳಿಕ ಮೈದಾನದಲ್ಲಿ ಇನ್ನೊಂದು ಜ್ಯೋತಿಯನ್ನು ಬೆಳಗಿಸಿದರು. ಸ್ಫೂರ್ತಿ ವೇದಿಕೆ ಮತ್ತು ವಿಕಾಸ ಯುವಕ ಮಂಡಳಿಯ ಕಾರ್ಯಕರ್ತರು ಜ್ಯೋತಿ ತೆಗೆದುಕೊಂಡು ಬಂದಿದ್ದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶೇಖ್‌ ತನ್ವೀರ್‌ ಆಸೀಫ್‌, ‘ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಒಂದು. 2,500 ವರ್ಷಗಳ ಇತಿಹಾಸ ಕನ್ನಡ ಭಾಷೆಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅನೇಕರ ತ್ಯಾಗ, ಬಲಿದಾನದಿಂದ ಕರ್ನಾಟಕದ ಏಕೀಕರಣವಾಗಿದೆ’ ಎಂದು ಹೇಳಿದರು.

‘ಕರ್ನಾಟಕದ ಏಕೀಕರಣದಲ್ಲಿ ಬಳ್ಳಾರಿ ಜಿಲ್ಲೆಯ ರಂಜಾನ್‌ ಸಾಬ್‌, ಕಡಪ ರಾಘವೇಂದ್ರ ರಾವ್‌, ಹರಗಿನಡೋಣಿ ಚನ್ನಬಸವನಗೌಡ, ಉತ್ತಂಗಿ ಚನ್ನಪ್ಪ, ಕೋ. ಚನ್ನಬಸಪ್ಪ, ಮಹಾಬಲೇಶ್ವರರಾವ್‌ ಅವರ ಕೊಡುಗೆ ಅಪಾರ’ ಎಂದು ಸ್ಮರಿಸಿದರು.

‘ಪ್ರಸಕ್ತ ವರ್ಷ ರಾಜ್ಯದಲ್ಲಿ ಕೆಲವೆಡೆ ಪ್ರವಾಹ, ಕೆಲವು ಕಡೆ ಬರದಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಪ್ರತಿಯೊಬ್ಬರೂ ಹೆಚ್ಚೆಚ್ಚೂ ಮರ ಗಿಡಗಳನ್ನು ಬೆಳೆಸಬೇಕು. ಪ್ಲಾಸ್ಟಿಕ್‌ ಬಳಕೆ ಕೈಬಿಡಬೇಕು. ಅಷ್ಟೇ ಅಲ್ಲ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಉಳಿಸೋಣ. ಆಂಗ್ಲ ಭಾಷೆ ವ್ಯಾಮೋಹದಿಂದ ನಾವೆಲ್ಲರೂ ಹೊರಬರಬೇಕು’ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ, ಡಿ.ವೈ.ಎಸ್ಪಿ. ವಿ. ರಘುಕುಮಾರ, ಗೃಹರಕ್ಷಕ ದಳದ ಪರಶುರಾಮ, ಶಿಕ್ಷಕ ಬಸವರಾಜ, ಕ್ರೀಡಾಂಗಣದ ಉಸ್ತುವಾರಿ ರೋಹಿಣಿ ಇದ್ದರು.

ಪ್ರತಿಕ್ರಿಯಿಸಿ (+)