ಉದ್ಧವ್ ಠಾಕ್ರೆ ಹೇಳಿಕೆಗೆ ಖಂಡನೆರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಹೊಸಪೇಟೆ: ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲಾಗುವುದು’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊಟ್ಟಿರುವ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿದರು. ‘ರಾಜ್ಯದ ಒಂದಿಂಚೂ ಭಾಗ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ನಮ್ಮ ರಾಜ್ಯದ ನೆಲ, ಜಲ, ಭಾಷೆಯ ವಿಷಯದಲ್ಲಿ ಹೊರಗಿನವರು ಮೂಗು ತೂರಿಸಬಾರದು. ಶಾಂತಿ ಕದಡುವ ಕೆಲಸವೂ ಮಾಡಬಾರದು’ ಎಂದು ಮನವಿಯಲ್ಲಿ ತಿಳಿಸಿದರು.
‘ಮಹಾರಾಷ್ಟ್ರ ಮುಖ್ಯಮಂತ್ರಿಯವರ ಹೇಳಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ನಮ್ಮ ರಾಜ್ಯದ ವಿಷಯದಲ್ಲಿ ಮೂಗು ತೂರಿಸದಂತೆ ಸ್ಪಷ್ಟವಾಗಿ ತಿಳಿಸಬೇಕು. ಒಂದುವೇಳೆ ಸರ್ಕಾರ ರಾಜ್ಯದ ವಿಷಯದಲ್ಲಿ ಕಠಿಣವಾಗಿ ನಡೆದುಕೊಳ್ಳದಿದ್ದರೆ ಸಂಘಟನೆಯ ವತಿಯಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜ್ಯಘಟ್ಟ ರವಿ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಷಣ್ಮುಖ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಟ್ಟಾ ಸ್ವಾಮಿ, ಕಟೇಶ್, ಜಯಂತ್, ಚೆಲುವಕಾಶಿ, ಮಹೇಶ್, ಮಂಜು, ಆನಂದ್ ನಾಗರಾಜ, ರಾಘವೇಂದ್ರ ಇದ್ದರು.
ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ಬೇರೆ ಕೆಲಸ ಇಲ್ಲ: ಸಚಿವ ಪ್ರಭು ಚೌವಾಣ್ ತಿರುಗೇಟು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.