ಸೋಮವಾರ, ನವೆಂಬರ್ 18, 2019
23 °C

‘ರಾಮಾಯಣ ಕಥೆಯಲ್ಲ, ಇತಿಹಾಸ’

Published:
Updated:
Prajavani

ಹೊಸಪೇಟೆ: ‘ವಾಲ್ಮೀಕಿ ರಾಮಾಯಣ ಕಥೆಯಲ್ಲ. ಅದೊಂದು ಇತಿಹಾಸ, ಪುರಾಣ. ರಾಮಾಯಣ ಅಖಂಡ ಭಾರತದ ನೆಲೆಯಲ್ಲಿ ರಚನೆಯಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವಿಠಲರಾವ್‌ ಗಾಯಕವಾಡ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ರಾಮಾಯಣ ಮಹಾಕಾವ್ಯ. ಪಿತೃವಾಕ್ಯ ಪರಿಪಾಲನೆ, ಏಕಪತ್ನಿ ವ್ರತಸ್ಥ, ಆಶ್ರಮ ಶಾಲೆಗಳ ಪರಿಕಲ್ಪನೆ, ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ, ವಿಜ್ಞಾನ-ತಂತ್ರಜ್ಞಾನದ ಪೂರಕ ಬಳಕೆ ಹೀಗೆ ಜನ ಸಾಮಾನ್ಯರ ಬದುಕಿಗೆ ಅಗತ್ಯವಾದ ಹಲವಾರು ಆದರ್ಶದ ಅಂಶಗಳನ್ನು ಒಳಗೊಂಡಿದೆ’ ಎಂದರು.

‘ವಾಲ್ಮೀಕಿ ರಾಮಾಯಣ ಎಲ್ಲೂ ಕೂಡ ರಾಮ ದೇವರ ಅವತಾರ ಎಂದು ತಿಳಿಸಿಲ್ಲ. ಇದು ರಾಮಾಯಣದ ವಾಸ್ತವತೆಯನ್ನು ಎತ್ತಿಹಿಡಿಯುವುದು. ಮಹರ್ಷಿ ವಾಲ್ಮೀಕಿಯ ತಪಸ್ಸು ತುಂಬಾ ಗಾಢವಾದದ್ದು. ಅಂತಃಸತ್ವ ಗಟ್ಟಿಯಾಗಿದ್ದರೆ ಮಾತ್ರ ಅಂತಹ ಗಾಢವಾದ ತಪಸ್ಸು ಮಾಡಲು ಸಾಧ್ಯ’ ಎಂದು ಹೇಳಿದರು.

ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿ, ‘ರಾಮಾಯಣ ಬೇರೆಯಲ್ಲ, ನಮ್ಮ ಬದುಕು ಬೇರೆಯಲ್ಲ. ಏಕೆಂದರೆ ರಾಮಾಯಣದಲ್ಲಿ ಬರುವ ರಾಮನು ನಮ್ಮೊಳಗಿದ್ದಾನೆ. ರಾವಣನು ನಮ್ಮೊಳಗಿದ್ದಾನೆ. ಅಂದರೆ ನಮ್ಮಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ರಾಮಾಯಣ ವಿಭಿನ್ನ ಪಾತ್ರಗಳ ಮೂಲಕ ಪ್ರತಿಬಿಂಬಿಸುತ್ತದೆ’ ಎಂದರು.

‘ರಾಮಾಯಣ ಎನ್ನುವುದು ಜನಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿರುವಂತಹದ್ದು. ಅದು ಜನರ ಜೀವನದ ವಾಸ್ತವತೆ ಮತ್ತು ಆದರ್ಶದ ಬಗ್ಗೆ ಒತ್ತಿ ಹೇಳುವುದು. ರಾಮಾಯಣದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕತೆ, ಪರಿಸರ ಪ್ರಜ್ಞೆ ಹೀಗೆ ಬದುಕಿನ ಎಲ್ಲಾ ವಿಚಾರಗಳು ಹೇರಳವಾಗಿವೆ’ ಎಂದು ವಿವರಿಸಿದರು.

ಕುಲಸಚಿವ ಎ.ಸುಬ್ಬಣ ರೈ, ‘ರಾಮಾಯಣ ಮಹಾಕಾವ್ಯವೂ ಎಷ್ಟು ಪ್ರಾದೇಶಿಕವೋ, ಅಷ್ಟೇ ಸಾರ್ವತ್ರಿಕವೂ, ಸಾರ್ವಕಾಲಿಕವೂ ಹೌದು. ರಾಮಾಯಣ ನಮ್ಮ ದಿನನಿತ್ಯದ ಬದುಕಿನ ಭಾಗವಾಗಿದೆ’ ಎಂದರು.

ಪೀಠದ ಸಂಚಾಲಕ ಅಮರೇಶ್‍ ಯತಗಲ್, ಉಪಕುಲಸಚಿವ ಎ. ವೆಂಕಟೇಶ, ಪ್ರಾಧ್ಯಾಪಕರಾದ ಎಫ್.ಟಿ ಹಳ್ಳಿಕೆರೆ, ಚಲುವರಾಜು, ಸಿದ್ದಗಂಗಮ್ಮ, ಗೋವಿಂದ, ಸಂಶೋಧನಾ ವಿದ್ಯಾರ್ಥಿ ನಾಗರಾಜ ಇದ್ದರು.

 

ಪ್ರತಿಕ್ರಿಯಿಸಿ (+)